ಬೆಳ್ತಂಗಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸುತ್ತಿದ್ದ ವೇಳೆ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬಾಗಿಲು ಏಕಾಏಕಿ ತೆರೆದುಕೊಂಡು ರಸ್ತೆಗೆ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿ ಸಹಾಯಕಿಯ ಸಹಕಾರದಲ್ಲಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಬೆಳ್ತಂಗಡಿ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಚದ್ಮಿಕಾ ಈ ಸಾಧಕಿ. ಈಕೆ ಮಾ. 31ರಂದು ತುಳು ಪರೀಕ್ಷೆ ಬರೆಯಲು ಬೆಳ್ತಂಗಡಿಯ ಪರೀಕ್ಷಾ ಕೇಂದ್ರಕ್ಕೆ ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆ ಆಗಮಿಸುತ್ತಿದ್ದ ವೇಳೆ ಸರಕಾರಿ ಬಸ್ ನ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಒಂದೇ ಮನೆಯ ಈ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು.

ಒಬ್ಬಾಕೆ ಚರಿಷ್ಮಾ (18) ಬೆಳ್ತಂಗಡಿ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಚದ್ಮಿಕಾ(16) ಎಸ್ಸೆಸ್ಸೆಲ್ಸಿ

ವಿದ್ಯಾರ್ಥಿನಿ.ಬಸ್ ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರು ಇದ್ದ ಕಾರಣ,ಓವರ್ ಲೋಡ್ ಆಗಿ ಈ ಘಟನೆ ನಡೆದಿತ್ತು .

ಬಸ್ ನಿಂದ ಬಿದ್ದು ಗಾಯಗೊಂಡಿದ್ದರು ವಿದ್ಯಾರ್ಥಿನಿ ಮಾ.31ರಂದು ನಡೆದ ಎಸ್ಸೆಸ್ಸೆಲ್ಸಿಯ ತುಳು ಪರೀಕ್ಷೆ ಬರೆದಿದ್ದರು.

ಮಾ.30 ರಂದು ನಡೆಯಬೇಕಿದ್ದ ಈ ಪರೀಕ್ಷೆ ಮಹಾವೀರ ಜಯಂತಿ ರಜೆ ಬದಲಾವಣೆ ಮಾಡಿದ ಕಾರಣ ಮಾ.31ಕ್ಕೆ ಮುಂದೂಡಲ್ಪಟ್ಟಿತ್ತು. ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಕ್ಯಾನಿಂಗ್ ಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಇಲಾಖೆಯ ನಿಯಮದಂತೆ ಈಕೆಯ ಉಪಸ್ಥಿತಿಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೂಲಕ ತುಳು ಪರೀಕ್ಷೆ ಹಾಗೂ ಏ. 2ರಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲಾಗಿತ್ತು.


ಇದೀಗ ಈಕೆ ಒಟ್ಟು 541 ಅಂಕಗಳನ್ನು ಪಡೆದಿದ್ದು ತುಳು ಪರೀಕ್ಷೆಯಲ್ಲಿ, 100 ಹಾಗೂ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 87 ಅಂಕಗಳನ್ನು ಪಡೆದಿದ್ದಾರೆ.