ಕೇರಳ ಸರ್ಕಾರವು ಕಾಸರಗೋಡನ್ನು ರಾಜ್ಯಕ್ಕೆ ಬಿಟ್ಟುಕೊಡಬೇಕು. ಇದು ಕನ್ನಡಿಗರ ಆಸ್ತಿ.
ಕನ್ನಡಪ್ರಭ ವಾರ್ತೆ ಮೈಸೂರು
ಕಾಸರಗೋಡಿನ ಕನ್ನಡ ಶಾಲೆಗಳ ಮಕ್ಕಳಿಗೆ ಮಲಯಾಳಂ ಭಾಷೆ ಹೇರುತ್ತಿರುವ ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಭಾನುವಾರ ಪ್ರತಿಭಟಿಸಿದರು.ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಕೇರಳ ಸರ್ಕಾರವು ಕಾಸರಗೋಡನ್ನು ರಾಜ್ಯಕ್ಕೆ ಬಿಟ್ಟುಕೊಡಬೇಕು. ಇದು ಕನ್ನಡಿಗರ ಆಸ್ತಿ. ಕೇರಳದ ಕಾಸರಗೋಡನ್ನು ರಾಜ್ಯಕ್ಕೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಜ.12 ರಂದು ಬೆಂಗಳೂರಿನಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ತಮಿಳುನಾಡಿನಿಂದ ತಾಳವಾಡಿ, ಹೊಸೂರು ವಿಚಾರವಾಗಿ ಅನ್ಯಾಯವಾಗಿದೆ. ಮಹಾರಾಷ್ಟ್ರದಲ್ಲಿ ಸೊಲ್ಲಾಪುರ, ಅಕ್ಕಲಕೋಟೆ, ಆಂಧ್ರದಿಂದ ಮಡಕಶಿರಿ ವಿಚಾರದಲ್ಲಿ ಅನ್ಯಾಯವಾಗಿದೆ. ಕಾಸರಗೋಡಿನಲ್ಲಿ ಕನ್ನಡಿಗರ ರಕ್ಷಣೆ ವಿಚಾರದಲ್ಲಿ ಎಲ್ಲ ಪಕ್ಷಗಳೂ ನಮ್ಮ ರಾಜ್ಯ ಸರ್ಕಾರವನ್ನು ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದರು.ಗಡಿನಾಡ ಪ್ರದೇಶದಲ್ಲಿ ಚೆನ್ನಾಗಿ ಓದಿ ಉತ್ತೀರ್ಣರಾದವರಿಗೆ ರಾಜ್ಯದ ಒಳ್ಳೆಯ ಶಾಲೆಗಳಲ್ಲಿ ಪ್ರವೇಶಾತಿ ನೀಡಬೇಕು. ಉದ್ಯೋಗ ಕೊಡಬೇಕು. ಹೊರನಾಡ ಕನ್ನಡಿಗರ ಹಿತಕ್ಕಾಗಿ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ಮಾಡಿ, ನೆರವು ನೀಡಲು 500 ಕೋಟಿ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಮುಖಂಡರಾದ ಬಿ.ಎ. ಶಿವಶಂಕರ್, ತೇಜೇಶ್ ಲೋಕೇಶ್ ಗೌಡ ಮೊದಲಾದವರು ಇದ್ದರು.