ಸಾರಾಂಶ
- ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಸಮುದಾಯದ ಮುಖಂಡರ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಭಿಮಾನಿಯನ್ನು ಧಾರುಣವಾಗಿ ಹತ್ಯೆಗೈದಿರುವ ನಟ ದರ್ಶನ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಂಡು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂದ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ, ಸಿನಿಮಾ ಶೈಲಿಯಲ್ಲಿ ಅಭಿಮಾನಿ ರೇಣುಕಸ್ವಾಮಿಯನ್ನು ಬರ್ಬರವಾಗಿ ಕೊಲೆಗೈದಿರುವುದು ದಿಗ್ಬ್ರಮೆ ಮೂಡಿಸಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನಟ ದರ್ಶನ್ ಈ ರೀತಿ ಪೈಶಾಚಿಕ ಕೃತ್ಯವೆಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದರು.
ನಟ ದರ್ಶನ್‌ರವರ ಸಿನಿಮಾಗಳನ್ನು ನೋಡಿ ಅಭಿಯಾನಿಯಾಗಿದ್ದ ರೇಣುಕಸ್ವಾಮಿ ಅವರನ್ನು ಸ್ನೇಹಿತ ರೊಂದಿಗೆ ಸೇರಿ ಚಿತ್ರಹಿಂಸೆ ನೀಡಿ ಹತ್ಯೆಗೈದಿರುವುದು ಘೋರ ಅಪರಾಧವಾಗಿದೆ. ನಾಗರಿಕರು ಈ ಕೃತ್ಯ ವನ್ನು ಖಂಡಿಸಬೇಕು. ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯಬೇಕಿದ್ದ ನಟ ದರ್ಶನ್ ಈ ವರ್ತನೆ ಖಂಡನೀಯ ಎಂದರು.ತೂಗದೀಪ ಶ್ರೀನಿವಾಸ್ ಅವರು ಸಿನಿಮಾದಲ್ಲಿ ಖಳನಾಯಕರು. ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ಉನ್ನತ ವ್ಯಕ್ತಿಯಾಗಿದ್ದರು. ಅವರ ಮಗ ದರ್ಶನ್ ಸಿನಿಮಾದಲ್ಲಿ ನಾಯಕ ನಟರಂತೆ ಗುರುತಿಸಿಕೊಂಡು ವೈಯಕ್ತಿ ವಾಗಿ ಖಳನಟರಾಗಿ ತನ್ನದೇ ಅಭಿಮಾನಿಯನ್ನು ಹೀನಾಯವಾಗಿ ಕೊಲೆಗೈದಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಆರೋಪಿಸಿದರು.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಬೇಕು. ಅಲ್ಲದೇ ಹತ್ಯೆಗೊಳಗಾದ ರೇಣುಕಾಸ್ವಾಮಿ ಕುಟುಂಟದ ಜೀವನೋಪಾಯಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಹಾಸಭಾ ನಿರ್ದೇಶಕ ನಿಶಾಂತ್, ಮುಖಂಡರಾದ ವೀರಭದ್ರಯ್ಯ, ಎ.ಎಸ್.ಎಸ್. ಆರಾಧ್ಯ, ಓಂಕಾರಸ್ವಾಮಿ, ಎಚ್.ಎನ್.ನಟರಾಜ್, ಈಶ್ವರಪ್ಪ, ಉಮೇಶ್, ಕಾಂತರಾಜ್, ಅಶೋಕ್ ಕುಮಾರ್, ಸುರೇಶ್, ಸಿ.ಆರ್.ಅಶೋಕ್, ಪಂಚಾಕ್ಷರಿ ಹಾಜರಿದ್ದರು.
15 ಕೆಸಿಕೆಎಂ 2ನಟ ದರ್ಶನ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ
ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.