ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಗೊಂದಲ ಪೋಷಕರು ಕಂಗಾಲು

| Published : Jun 16 2024, 01:53 AM IST / Updated: Jun 16 2024, 11:59 AM IST

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಗೊಂದಲ ಪೋಷಕರು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷ ಶುರುಗೊಳ್ಳುತ್ತಿದ್ದಂತೆಯೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕು

ಮಂಜುನಾಥ ಕೆ.ಎಂ.

ಬಳ್ಳಾರಿ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆಯ್ದ ಶಾಲೆಗಳಲ್ಲಿ ಆರಂಭಿಸಿದ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ಹಾಗೂ ಒಂದನೇ ತರಗತಿ ಪ್ರವೇಶ ಗೊಂದಲದ ಗೂಡಾಗಿ ಪರಿಣಮಿಸಿದೆ.ಇಲಾಖೆಯ ಬದಲಾಗುವ ಆದೇಶದ ಸುತ್ತೋಲೆಗಳು ಶಾಲಾ ಶಿಕ್ಷಕರನ್ನು ಹೈರಾಣಾಗಿಸಿವೆ. ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಶುರುಗೊಳ್ಳುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿಸಿದೆ.

ಪೂರ್ವ ಪ್ರಾಥಮಿಕ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಬೇಕು. ಇದಕ್ಕಾಗಿ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಇಡೀ ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ರಾಜ್ಯ ಸರ್ಕಾರ ಹೋರಾಟಕ್ಕೆ ಮಣಿದು ಸದ್ಯಕ್ಕೆ ಎಲ್‌ಕೆಜಿ-ಯುಕೆಜಿ ಪ್ರವೇಶ ಬೇಡ ಎಂದು ಮತ್ತೊಂದು ಆದೇಶ ಹೊರಡಿಸಿದರೆ ಹೇಗೆ ಎಂಬ ಚಿಂತೆ ಪೋಷಕರದ್ದು.

ಏನಿದು ಸಮಸ್ಯೆ? ಯಾಕಿಷ್ಟು ಗೊಂದಲ?: 

ಪ್ರಸಕ್ತ ಶೈಕ್ಷಣಿಕ ವರ್ಷ ಶುರುಗೊಳ್ಳುತ್ತಿದ್ದಂತೆಯೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ನಿರ್ಧಾರಕ್ಕೆ ಬಂದ ಸರ್ಕಾರ ಆಯಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಆದೇಶ ಹೊರಡಿಸಿತು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ, 1ನೇ ತರಗತಿ ಆರಂಭಿಸಿ ವರದಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರಿಂದ ಆದೇಶ ಬಂತು. ನಿರ್ದಿಷ್ಟ ಶಾಲೆಗಳ ಮುಖ್ಯಸ್ಥರು ಮಕ್ಕಳ ಆಯ್ಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಂಡರು. ಇದಾದ ಕೆಲ ದಿನಗಳಲ್ಲಿಯೇ ಮತ್ತೊಂದು ಆದೇಶ ರವಾನಿಸಿದ ಇಲಾಖೆ, ಮುಂದಿನ ಆದೇಶ ಬರುವವರೆಗೆ ಆಂಗ್ಲ ಮಾಧ್ಯಮದ ತರಗತಿಗಳನ್ನು ಆರಂಭಿಸದೇ ತಟಸ್ಥವಾಗಬೇಕು " ಎಂದು ಸೂಚಿಸಿತು. ನಂತರ ಎಲ್‌ಕೆಜಿ, ಯುಕೆಜಿ ಆರಂಭಿಸುವಂತೆ ಶಿಕ್ಷಣ ಇಲಾಖೆಯಿಂದ ಆದೇಶ ಬಂದಿದ್ದು, ಈ ಆದೇಶ ಎಷ್ಟು ದಿನಗಳವರೆಗೆ ಉಳಿಯಲಿದೆ ಎಂಬ ಸಂಶಯ ಶಿಕ್ಷಕರು ಹಾಗೂ ಪೋಷಕರನ್ನು ಕಾಡುತ್ತಿದೆ.

ಪ್ರಸಕ್ತ ವರ್ಷದಿಂದ ಜಿಲ್ಲೆಯಲ್ಲಿ ಆಯ್ದ 119 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಎಲ್‌ಕೆಜಿ 566, ಯುಕೆಜಿ 363, ಇಂಗ್ಲೀಷ್ ಮಾಧ್ಯಮದ 1ನೇ ತರಗತಿಗೆ 312 ಮಕ್ಕಳು ಪ್ರವೇಶ ಪಡೆದಿದ್ದಾರೆ. ಎಲ್‌ಕೆಜಿ-ಯುಕೆಜಿ, 1ನೇ ತರಗತಿಗೆ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಕೊಡಿಸಲು ಪೋಷಕರು ಉತ್ಸುಕರಾಗಿದ್ದಾರೆ. ಹಲವೆಡೆ ಮಕ್ಕಳಿಗೆ ಪ್ರವೇಶ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ರಾಜಕೀಯ ನಾಯಕರ ಮೂಲಕ ಆಯಾ ಶಾಲೆಗಳ ಮುಖ್ಯಸ್ಥರಿಗೆ ಪೋಷಕರು ಕರೆ ಮಾಡಿಸಿ, ಪ್ರವೇಶ ಪಡೆದುಕೊಳ್ಳುವಂತೆ ಸೂಚಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಧೋರಣೆ ಖಂಡಿಸಿ ಹೋರಾಟ ಮುಂದುವರಿಸಿದ್ದೇವೆ. ಎಲ್‌ಕೆಜಿ-ಯುಕೆಜಿ ಶುರುಗೊಳಿಸುವಂತಿದ್ದರೆ ಅಂಗನವಾಡಿಯಲ್ಲೇ ಆರಂಭಿಸಲಿ. ಸರ್ಕಾರದ ನಿಲುವು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಆರ್ಕಾಣಿ.

ಖಾಸಗಿ ಶಾಲೆಗಳಲ್ಲಿ ಓದಿಸಲು ನಮ್ಮಲ್ಲಿ ಹಣವಿಲ್ಲ. ಸರ್ಕಾರಿ ಶಾಲೆಯಲ್ಲೇ ಇಂಗ್ಲೀಷ್ ಓದಿಸಬೇಕು ಎಂಬ ಆಸೆ ಇತ್ತು. ಆದರೆ, ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಬಳ್ಳಾರಿ ಸರ್‌ ಎಂವಿ ನಗರದ ಮನ್ನೆಪ್ಪ-ಸುಶೀಲಮ್ಮ ದಂಪತಿ.

ಎಲ್‌ಕೆಜಿ-ಯುಕೆಜಿ ಆರಂಭಿಸಿ ತರಗತಿ ಶುರುಗೊಳಿಸುವಂತೆ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ನಾವಿನ್ನು ಶುರುಗೊಳಿಸಿಲ್ಲ. ಒಂದೆರಡು ದಿನ ನೋಡುತ್ತೇವೆ. ಸರ್ಕಾರದಿಂದ ಮತ್ತೊಂದು ಆದೇಶ ಬಾರದಿದ್ದರೆ ತರಗತಿ ಆರಂಭಿಸುತ್ತೇವೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಚಿಸದ ಶಿಕ್ಷಕ.