ಸಾರಾಂಶ
ಸಂಡೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಜಿಕೆ ತರಗತಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಸ್ಥಗಿತಗೊಳಿಸಿ, ಅಂಗನವಾಡಿ ಕೇಂದ್ರಗಳಲ್ಲಿಯೇ ಈ ತರಗತಿಗಳನ್ನು ಆರಂಭಿಸಲು ಒತ್ತಾಯಿಸಿ ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿ ಸದಸ್ಯರು ಗುರುವಾರ ಪಟ್ಟಣದಲ್ಲಿ ಶಾಸಕರ ಕಚೇರಿಗೆ ಹಾಗೂ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಎಳೆ ನಾಗಪ್ಪನವರಿಗೆ ಸಲ್ಲಿಸಿದರು. ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಖಾಜಾಬನಿ, ಅಂಗನವಾಡಿ ಕೇಂದ್ರಗಳು ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಮಕ್ಕಳ ಪೌಷ್ಠಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸುತ್ತವೆ. ಶಿಕ್ಷಣ ಇಲಾಖೆಯಲ್ಲಿ ಈಗಾಗಲೆ ೩೬ ಸಾವಿರ ಶಿಕ್ಷಕರ ಕೊರತೆ ಇದೆ. ಹಲವು ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದೆ. ಆದ್ದರಿಂದ ಕೆಕೆಆರ್‌ಡಿಪಿ ಯೋಜನೆ ಅಡಿಯಲ್ಲಿ ೧೦೦೮ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ನಾಗಮ್ಮ, ಕಾರ್ಯದರ್ಶಿ ಹೆಚ್.ಎಂ. ರೇಖಾ, ಖಜಾಂಚಿ ನಾಗರತ್ನ, ಸದಸ್ಯರಾದ ಶಂಕ್ರಮ್ಮ, ತಿಮ್ಮಕ್ಕ, ಜಯಮ್ಮ, ವಿ. ರೇಣುಕಾ, ಅನುಸೂಯಾ, ಮಂಗಳಮ್ಮ, ಹೆಚ್. ನಾಗಮ್ಮ, ನೇತ್ರಮ್ಮ, ಚಂದ್ರಮ್ಮ, ಗಂಗಮ್ಮ, ಸತ್ಯಮ್ಮ, ಮಂಜುಳಾ, ಡಿ. ಸುಮಂಗಲ ಮುಂತಾದವರು ಉಪಸ್ಥಿತರಿದ್ದರು. ಅಂಗನವಾಡಿ ನೌಕರರ ಸಂಘದ ಮುಖಂಡರು ಹಾಗೂ ಸದಸ್ಯರು ಗುರುವಾರ ಸಂಡೂರಿನ ಹೊರವಲಯದಲ್ಲಿರುವ ಕೃಷ್ಣಾನಗರದಲ್ಲಿನ ಶಾಸಕರ ಕಚೇರಿ ಸಿಬ್ಬಂದಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು.