ರಾಮನಗರ: ಶ್ರೀ ಬಲಮುರಿ ಗಣಪತಿ ದೇವಾಲಯದ ಬ್ರಹ್ಮಕುಂಭಾಭಿಷೇಕ ಮಹೋತ್ಸವವನ್ನು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳು ನಡೆಸಿಕೊಡಲಿದ್ದಾರೆ ಎಂದು ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ವಿದ್ಯಾ ಚೌಡೇಶ್ವರಿ ಮಠದ ಶ್ರೀ ವಿದ್ಯಾನಂದ ಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳಲ್ಲಿ ಶ್ರೀಗಳು ಧರ್ಮ ವಿಜಯ ಯಾತ್ರೆ ಹಮ್ಮಿಕೊಂಡಿರುವ ಪ್ರಯುಕ್ತ ರಾಮನಗರಕ್ಕೆ ಭೇಟಿ ನೀಡಲಿದ್ದು, ಶ್ರೀ ಬಲಮುರಿ ಗಣಪತಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಜೂ.27ರ ಸಂಜೆ ರಾಮನಗರಕ್ಕೆ ಆಗಮಿಸಲಿರುವ ಶ್ರೀಗಳನ್ನು ನಗರದ ರಾಜಬೀದಿಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವುದು. ರಾಜಬೀದಿಯಲ್ಲಿ ಅವರನ್ನು ರಥದ ಮೂಲಕ ಕರೆ ತಂದು ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಅಂದು ಬೆಳಗ್ಗೆ 8ಗಂಟೆಗೆ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಸಲಿದ್ದಾರೆ. ಇದಾದ ಬಳಿಕ ಚತುರ್ದಶಿ ಮಹಾಕುಂಭಾಭಿಷೇಕದ ಅಂಗವಾಗಿ ಹೋಮ ನಡೆಯಲಿದ್ದು, ಜಗದ್ಗುರುಗಳ ಅಮೃತ ಹಸ್ತದಿಂದ ಶ್ರೀ ಬಲಮುರಿ ಮಹಾಗಣಪತಿ ಬ್ರಹ್ಮ ಕುಂಭಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. ನಂತರ ಗುರುಗಳಿಂದ ಅನುಗ್ರಹ ಭಾಷಣ ಹಾಗೂ ಫಲ ಮಂತ್ರಾಕ್ಷತೆ, ನೀಡಲಿದ್ದಾರೆ. ಜತೆಗೆ ಅನ್ನಸಂತರ್ಪಣೆಯನ್ನ ಸಹ ಏರ್ಪಡಿಸಲಾಗಿದೆ ಎಂದರು.

ಜಗದ್ಗುರುಗಳು ಜೂನ್ ತಿಂಗಳಿನಲ್ಲಿ ಧರ್ಮ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದು, ರಾಮನಗರದಿಂದಲೇ ವಿಜಯ ಯಾತ್ರೆಯನ್ನು ಆರಂಭ ಮಾಡಲಿದ್ದಾರೆ. ರಾಮನಗರವೂ ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಸಾಕಷ್ಟು ಹಿನ್ನೆಲೆಯನ್ನು ಹೊಂದಿದೆ. ಹಾಗಾಗಿ ದೇವಾಲಯದ ಮಂಡಳಿ ಅವರು ದೇವಾಲಯದ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಜಗದ್ಗುರುಗಳನ್ನು ಆಹ್ವಾನಿಸಿದ್ದರು. ಗುರುಗಳು ಸಹ ಖುಷಿಯಿಂದಲೇ ಕಾರ್ಯಕ್ರಮದಲ್ಲಿ ಭಾಗಿ ಯಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.


ಜಗದ್ಗುರುಗಳ ಆಗಮನದ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಜಗದ್ಗುರುಗಳು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಶ್ರೀ ವಿದ್ಯಾನಂದ ಸ್ವಾಮಿ ತಿಳಿಸಿದರು.

ಬಲಮುರಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಗಣೇಶ್ ಭಟ್, ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಟಿ.ರಂಗರಾಜು. ಖಜಾಂಚಿ ಹರ್ಷವರ್ಧನ್, ಪ್ರಮುಖರಾದ ಪಿ.ವಿ‌.ಪ್ರಭಾಕರ್, ಆರ್.ವಿ.ಸುರೇಶ್, ಬಿಜೆಪಿ ಮಂಜು, ಕುಮಾರ್, ಮಾಲ್ತೇಶ್, ಚೇತನ್ ಗೌಡ, ರಾಹುಲ್ ರೆಡ್ಡಿ, ಹೆಚ್. ಎಲ್.ಚೇತನ್, ಸ್ವರ್ಣೇಶ್, ಪುರುಷೋತ್ತಮ ರೆಡ್ಡಿ, ಅಕ್ಷಯ್, ಕಿರಣ್, ಮೋಹಿತ್, ಶಿವಕುಮಾರ್ ಮತ್ತಿತರರು ಇದ್ದರು.

20ಕೆಆರ್ ಎಂಎನ್ 4.ಜೆಪಿಜಿ

ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ವಿದ್ಯಾ ಚೌಡೇಶ್ವರಿ ಮಠದ ಶ್ರೀ ವಿದ್ಯಾನಂದ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.