ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಮನೆಯ ಕಳ್ಳತನ ಪ್ರಕರಣವನ್ನು ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಭೇದಿಸಿ ಬರೋಬ್ಬರಿ 6.40 ಲಕ್ಷ ರು. ಮೌಲ್ಯದ 85 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ಜೂನ್ 18 ರಂದು ಗ್ರಾಮದ ನಿವಾಸಿ ಬೈರಮ್ಮ ಅವರು ನೀಡಿದ ದೂರಿನ ಪ್ರಕಾರ, ಆಂಜನೇಯಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತೆರಳುವ ವೇಳೆ ಮನೆಯನ್ನು ಬೀಗ ಹಾಕಿ ಹೋಗಿದ್ದರು. ನಂತರ ಮನೆಗೆ ಮರಳಿದಾಗ ಮನೆಯೊಳಗಿನ ಬೀರುವಿನ ಬಾಗಿಲು ತೆರೆದಿದ್ದು, ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳುವಾಗಿರುವುದು ಬೆಳಕಿಗೆ ಬಂದಿತ್ತು.ಕಳುವಾದ ಆಭರಣಗಳಲ್ಲಿ 45 ಗ್ರಾಂ ತೂಕದ ಲಾಂಗ್ ಚೈನ್, 25 ಗ್ರಾಂ ತೂಕದ ನೆಕ್ಲೆಸ್, ನಾಲ್ಕು ಉಂಗುರಗಳು ಹಾಗೂ ಕಿವಿಯೋಲೆಗಳು ಸೇರಿದ್ದು, ಒಟ್ಟು 85 ಗ್ರಾಂ ಚಿನ್ನಾಭರಣಗಳ ಮೌಲ್ಯ ₹6.40 ಲಕ್ಷ ಎಂದು ಅಂದಾಜಿಸಲಾಗಿತ್ತು.ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿ ಮುನಿರಾಜು (42), ಚಿಕ್ಕದಾಸೇನಹಳ್ಳಿ ಗ್ರಾಮದ ನಿವಾಸಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ನೂರಕ್ಕೆ ನೂರರಷ್ಟು ಸಂಪೂರ್ಣ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಪಿಐ ಜೆ. ಆನಂದಕುಮಾರ್, ಎಸ್‌ಐ ಸುನೀಲ್ ಕುಮಾರ್ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.ಸುದ್ದಿ ಚಿತ್ರ ೧ ಶಿಡ್ಲಘಟ್ಟ ವೃತ್ತದ ಸಿಪಿಐ ಜೆ. ಆನಂದಕುಮಾರ್, ಎಸ್‌ಐ ಸುನೀಲ್ ಕುಮಾರ್ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಯಿಂದ ಕಳವಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.