ಸಾರಾಂಶ
ವಿಜಯದಶಮಿಯ ಪ್ರಮುಖ ಆಚರಣೆಗಳಲ್ಲಿ ಒಂದಾದ ಆಯುಧಪೂಜೆ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಸೋಮವಾರದಿಂದಲೇ ಸೇವಂತಿಗೆ ಬೆಲೆ ಗಗನಕ್ಕೇರಿತ್ತು. ಮಾರಿಗೆ 50- 60 ರು. ಹೂ ಏಕಾಏಕಿ 100- 120ಕ್ಕೆ ಹೆಚ್ಚಾಯಿತು. ಆದರೆ, ಸಂಜೆ ವೇಳೆಗೆ ಕೇವಲ ನಂಜನಗೂಡು ಭಾಗದಿಂದ ಮಾತ್ರವಲ್ಲದೆ ಎಚ್.ಡಿ.ಕೋಟೆ, ಹುಣಸೂರು ಕಡೆಯಿಂದಲೂ ಹೂ ಬರಲಾರಂಭಿಸಿತು.
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುವಿಜಯದಶಮಿಯ ಪ್ರಮುಖ ಆಚರಣೆಗಳಲ್ಲಿ ಒಂದಾದ ಆಯುಧಪೂಜೆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.
ಸೋಮವಾರದಿಂದಲೇ ಸೇವಂತಿಗೆ ಬೆಲೆ ಗಗನಕ್ಕೇರಿತ್ತು. ಮಾರಿಗೆ 50- 60 ರು. ಹೂ ಏಕಾಏಕಿ 100- 120ಕ್ಕೆ ಹೆಚ್ಚಾಯಿತು. ಆದರೆ, ಸಂಜೆ ವೇಳೆಗೆ ಕೇವಲ ನಂಜನಗೂಡು ಭಾಗದಿಂದ ಮಾತ್ರವಲ್ಲದೆ ಎಚ್.ಡಿ.ಕೋಟೆ, ಹುಣಸೂರು ಕಡೆಯಿಂದಲೂ ಹೂ ಬರಲಾರಂಭಿಸಿತು.ಇದರಿಂದಾಗಿ ಏಕಾಏಕಿ ಹೂವಿನ ದರ ಕುಸಿಯತೊಡಗಿತು. ರಾತ್ರಿ ವೇಳೆಗೆ ಮಾರಿಗೆ 80 ರು.ಗೆ ನೀಡಲಾಯಿತು. ಬೂದುಗುಂಬಳವಂತು ಗುಡ್ಡೆ ಹಿಡಿದಿತ್ತು. ಕೆಲವು ಕಡೆ ಕೆಜಿ ಲೆಕ್ಕದಲ್ಲಿ ನೀಡಿ ಯಾಮಾರಿಸಿದರೆ, ಮತ್ತೆ ಹಲವು ಕಡೆ ಉಂಡೆ ಲೆಕ್ಕದಲ್ಲಿ ಕಡಿಮೆ ದರಕ್ಕೆ ನೀಡಿದರು. ಸಣ್ಣದು, ಉಳುಕು ಬಿದ್ದಿರುವುದನ್ನು ಎಂಜಿ ರಸ್ತೆ ಮಾರುಕಟ್ಟೆಯಲ್ಲಿ 30 ರು. ಮಾರಾಟ ಮಾಡಿದರು.
ಸ್ವಲ್ಪ ದಪ್ಪದು, ಚೆನ್ನಾಗಿ ಇರುವ ಕುಂಬಳವನ್ನು ಒಂದಕ್ಕೆ 100 ರು.ನಂತೆ ಮಾರಾಟ ಮಾಡಿದರು. ಇನ್ನು ಚಂಡುವಿನ ದರ ಪ್ರತಿ ಮಾರಿಗೆ 50 ರು.ಇತ್ತು.ಬಾಳೆ ಕಂಬ, ಕಬ್ಬಿನ ಗರಿ ಸೇರಿ ಜೊತೆಗೆ ಕೆಲವು ಕಡೆ 50 ರು. ಮಾರಾಟ ಮಾಡಿದರೆ, ಮತ್ತೆ ಕೆಲವು ಕಡೆ 30 ರು. ಮಾರಿದರು. ಇದರ ಜೊತೆಗೆ ಮಾವಿನ ಸೊಪ್ಪನ್ನು 10 ಅಥವಾ 20 ರು.ಗೆ ಮಾರಾಟ ಮಾಡಲಾಯಿತು.
ನಿಂಬೆ ಹಣ್ಣನ್ನು ಹಲವು ಕಡೆಗಳಲ್ಲಿ ಒಂದಕ್ಕೆ 8 ರು.ನಂತೆ ಮಾರಾಟ ಮಾಡಿದರು. ಮಾರುಕಟ್ಟೆಗೆ ಅಷ್ಟಾಗಿ ನಿಂಬೆ ಹಣ್ಣು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಿಂಬೆ ಹಣ್ಣಿನ ದರ ಏರಿಕೆಯಾಗಿತ್ತು. ಇದರ ಜೊತೆಗೆ ಪುರಿ, ಖಾರ, ಕಡಲೆ, ಸ್ವೀಟು ಅಂಗಡಿಗಳ ಸಾಲು ಸಾಲು ಇತ್ತು.ನಗರದ ಧನ್ವಂತರಿ ರಸ್ತೆ, ಡಿ. ಸುಬ್ಬಯ್ಯ ರಸ್ತೆ, ಎಂಜಿ ರಸ್ತೆ ಮಾರುಕಟ್ಟೆಯ ಇಕ್ಕೆಲಗಳು, ದೇವರಾಜ ಅರಸು ರಸ್ತೆ, ನಂಜುಮಳಿಗೆ, ಜೆಎಲ್.ಬಿ ರಸ್ತೆ, ಮಾನಂದವಾಡಿ ರಸ್ತೆ ಮುಂತಾದ ಕಡೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.
ಪ್ರಮುಖ ಸಿಹಿ ತಿನಿಸು ಮಾರಾಟಗಾರರು ಮತ್ತು ಬಟ್ಟೆ ಅಂಗಡಿಗಳಲ್ಲಿಯೂ ಹೆಚ್ಚು ಜನಸಂದಣಿ ಕಂಡುಬಂತು.