ವಿಜಯದಶಮಿಯಂದು 58 ಸ್ತಬ್ಧಚಿತ್ರಗಳ ‘ಜಂಬೋ’ ಸವಾರಿ

| Published : Oct 01 2025, 01:00 AM IST

ವಿಜಯದಶಮಿಯಂದು 58 ಸ್ತಬ್ಧಚಿತ್ರಗಳ ‘ಜಂಬೋ’ ಸವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಬರೋಬರಿ 58 ಸ್ತಬ್ಧಚಿತ್ರಗಳು ಸವಾರಿ ಮಾಡಲಿವೆ. ಕಳೆದ ವರ್ಷ ಅತೀ ಹೆಚ್ಚು 51 ಸ್ತಬ್ಧಚಿತ್ರಗಳು ಸಾಗಿ ಗಮನ ಸೆಳೆದಿದ್ದವು. ಈ ಬಾರಿ ಹೆಚ್ಚುವರಿಯಾಗಿ 7 ಸೇರ್ಪಡೆಯಾಗಿದ್ದು, ಒಟ್ಟು 58 ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಲಿವೆ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಬರೋಬರಿ 58 ಸ್ತಬ್ಧಚಿತ್ರಗಳು ಸವಾರಿ ಮಾಡಲಿವೆ. ಕಳೆದ ವರ್ಷ ಅತೀ ಹೆಚ್ಚು 51 ಸ್ತಬ್ಧಚಿತ್ರಗಳು ಸಾಗಿ ಗಮನ ಸೆಳೆದಿದ್ದವು. ಈ ಬಾರಿ ಹೆಚ್ಚುವರಿಯಾಗಿ 7 ಸೇರ್ಪಡೆಯಾಗಿದ್ದು, ಒಟ್ಟು 58 ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಲಿವೆ.

ಸ್ತಬ್ಧಚಿತ್ರಗಳು ನಾಡಿನ ವೈಭವ, ಇತಿಹಾಸ, ಜಿಲ್ಲೆಗಳ ವೈವಿಧ್ಯತೆ, ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮಗಳ ಯೋಜನೆಗಳ ಅರಿವು ಮತ್ತು ಮಹತ್ವವನ್ನು ಸಾರಲು ಸಜ್ಜಾಗಿವೆ.

ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರಗಳು, ರಾಜ್ಯ ಸರ್ಕಾರಕದ 8 ಇಲಾಖೆಗಳ ಸ್ತಬ್ಧಚಿತ್ರಗಳು, 13 ನಿಗಮ ಮಂಡಳಿಗಳ ಸ್ತಬ್ಧಚಿತ್ರಗಳು ಹಾಗೂ ಇತರೆ 6 ಸೇರಿದಂತೆ ಒಟ್ಟು 58 ಸ್ತಬ್ಧಚಿತ್ರಗಳು ದಸರಾ ಜಂಬೂಸವಾರಿಯ ಮೆರುಗು ಹೆಚ್ಚಿಸಲು ಸನ್ನದ್ಧವಾಗಿವೆ.

ಜಿಲ್ಲೆಗಳ ವೈವಿಧ್ಯತೆ:

ಮಂಡ್ಯ ಜಿಪಂನಿಂದ ಸ್ವಾತಂತ್ರ್ಯ ಹೋರಾಟದ ದೀಪ- ಶಿವಪುರದ ಧ್ವಜ ಸತ್ಯಾಗ್ರಹ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಜ್ಞಾನಿ- ವಿಜ್ಞಾನಿಗಳ ನಾಡು, ಧಾರವಾಡ ಜಿಲ್ಲೆಯಿಂದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ, ಉತ್ತರ ಕನ್ನಡ ಜಿಲ್ಲೆಯಿಂದ ರಾಣಿ ಚನ್ನಭೈರದೇವಿ- ಮಸಾಲೆ ರಾಣಿ. ಬಾಗಲಕೋಟೆ ಜಿಲ್ಲೆಯಿಂದ ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು.

ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ, ಶಿವಮೊಗ್ಗ ಜಿಲ್ಲೆಯಿಂದ ಕೇದಾರೇಶ್ವರ ದೇವಸ್ಥಾನ- ಬಳ್ಳಿಗಾವಿ, ಬಳ್ಳಾರಿ ಜಿಲ್ಲೆಯ ಸೆಪ್ಟೆಂಬರ್‌ ನಲ್ಲಿ ಸಂಡೂರು ನೋಡು, ವಿಜಯಪುರ ಜಿಲ್ಲೆಯಿಂದ ಶಿವನ ಪ್ರತಿಮೆ ಶಿವಗಿರಿ ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿಬಿಂಬಿಸುವ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ.

ಕಲಬುರಗಿ ಜಿಲ್ಲೆಯಿಂದ ಶರಣಬಸವೇಶ್ವರ ಸಂಸ್ಥಾನ, ಮಾಹಾದಾಸೋಹಿ ಪೀಠ ಮತ್ತು ಬಹುಮನಿ ಸುಲ್ತಾನ ಸಾಮ್ರಾಜ್ಯ, ತುಮಕೂರು ಜಿಲ್ಲೆಯಿಂದ ನವ್ಯ ಮತ್ತು ಪ್ರಾಚೀನ ಶಿಲ್ಪಕಲಾ ಸಂಕೀರ್ಣ- ನಮ್ಮ ತುಮಕೂರು ಜಿಲ್ಲೆ, ಉಡುಪಿ ಜಿಲ್ಲೆಯಿಂದ ಸ್ವಚ್ಛ ಉಡುಪಿ, ಕೊಡಗು ಜಿಲ್ಲೆಯ ಕೊಡಗಿನ ಚಾರಣ ಪಥಗಳು. ಹಾವೇರಿ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹಾದೇವ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಘಾಟಿ ಸುಬ್ರಮಣ್ಯ ದೇವಸ್ಥಾನ- ದೇವನಹಳ್ಳಿ ಕೋಟಿ ಮತ್ತು ಕೆಂಪೇಗೌಡರ ವಿಗ್ರಹ, ಚಿಕ್ಕಮಗಳೂರು ಜಿಲ್ಲೆಯಿಂದ ‘ಭದ್ರಬಾಲ್ಯ ಯೋಜನೆ’ ಚಿಕ್ಕಮಗಳೂರು ಜಿಲ್ಲೆ, ಗದಗ ಜಿಲ್ಲೆಯ ಜೋಡು ಕಳಸದ ಗುಡಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಗೊಂಬೆ- ಹೈನುಗಾರಿಕೆ- ರೇಷ್ಮೆ, ಮೈಸೂರು ಜಿಲ್ಲೆಯಿಂದ ಬದನವಾಳು ನೂಲುವ ಪ್ರಾಂತ್ಯ.

ಬೆಂಗಳೂರು ನಗರ ಜಿಲ್ಲೆಯಿಂದ ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ, ಚಾಮರಾಜನಗರ ಜಿಲ್ಲೆಯಿಂದ ಪ್ರಕೃತಿಯ ಸೌರ್ಹದತೆಯೊಂದಿಗೆ ಪ್ರಗತಿಯತ್ತ ಸಾಗೋಣ, ಬೆಳಗಾವಿ ಜಿಲ್ಲೆಯ ಶ್ರೀ ಮಹಾಕಾಳಿ ಮಾಯಕ್ಕಾ ದೇವಿ ದೇವಸ್ಥಾನ ಚಂಚಲಿ, ವಿಜಯನಗರ ಜಿಲ್ಲೆಯ ವಿಶಿಷ್ಟ ವಿಜಯನಗರ- ವಿಜಯನಗರ ಜಿಲ್ಲೆಯ ವೈಶಿಷ್ಟ್ಯತೆಗಳು, ಹಾಸನ ಜಿಲ್ಲೆಯಿಂದ ಗೊಮ್ಮಟೇಶ್ವರ- ಕಾಫಿ.

ಬೀದರ ಜಿಲ್ಲೆಯ ಬೀದರ ಕೋಟೆ, ದಾವಣಗೆರೆ ಜಿಲ್ಲೆಯ ಮನೆ ಮನೆಗೆ ಗಂಗೆ, ಚಿತ್ರದುರ್ಗ ಜಿಲ್ಲೆಯ ರಾಜವೀರ ಮದಕರಿನಾಯಕ, ರಾಯಚೂರು ಜಿಲ್ಲೆಯಿಂದ ಸರ್ವ ಧರ್ಮ ಸಾಮರಸ್ಯದ ನೆಲೆಬೀಡು ರಾಯಚೂರು, ಕೋಲಾರ ಜಿಲ್ಲೆಯ ರೇಷ್ಮೆ, ಹೈನುಗಾರಿಕೆ ಮತ್ತು ಮಾವು ಹಾಗೂ ಯಾದಗಿರಿ ಜಿಲ್ಲೆಯ ಟೇಲರ್ ಮಂಜಿಲ್- 1844, ಸುರಪುರ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ.

ವಿವಿಧ ಇಲಾಖೆಗಳು:

ನಗರಾಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್- ಶುದ್ಧ ಕಾಳಜಿಯ ನಗರಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಉದ್ಯೋಗವಕಾಶ ಮತ್ತು ಸ್ವಾವಲಂಬನೆ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಯಕ್ರಮಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಸ್ತಬ್ಧಚಿತ್ರ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ತಬ್ಧಚಿತ್ರ, ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜ್ಞಾನವೇ ಶಕ್ತಿ, ಶಿಕ್ಷಣವೇ ಆಸ್ತಿ ಎಂಬುದೇ ಸಂಸ್ಥೆಯ ಪರಮ ಧೇಯ, ಬುದ್ಧಿವಂತಿಕೆ, ಸಮಾನತೆ, ಭರವಸೆಗಳೇ ಇಲಾಖೆಯ ಮೊದಲ ಆದ್ಯತೆ.

ನಿಗಮ ಮಂಡಳಿಗಳು:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್ಆರ್ ಟಿಸಿ) ಶಕ್ತಿ ಯೋಜನೆಯ ಯಶೋಗಾಥೆ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಭೋವಿ ಸಮುದಾಯದವರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡಲು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಅಭೂತಪೂರ್ವ ಸಾಧನ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಶುದ್ಧ ಇಂಧನ ಮತ್ತು ಸಂಪನ್ಮೂಲ ಸಂರಕ್ಷಣೆಯ ಮೂಲಕ ಗ್ರಾಮೀಣ ಭಾರತದ ಸಶಕ್ತಿಕರಣ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ (ಕೆಆರ್ ಇಐಎಸ್) ಜ್ಞಾನವೇ ದಿವ್ಯಜ್ಯೋತಿ- ಮೂಲ ಶಿಕ್ಷಣದಿಂದ ಮೌಲ್ಯಾಧಾರಿತ ಶಿಕ್ಷಣದೆಡೆಗೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಡಿಬಿ) ಭವ್ಯ ಭವಿಷ್ಯ ನಿರ್ಮಿಸುವ ಕಾರ್ಯ ಪರಿಸರ, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ಕೌಶಲ್ಯ ಅಭಿವೃದ್ಧಿ ಯೋಜನೆಯಿಂದ ಚರ್ಮ ಕುಶಲಕರ್ಮಿಗಳ/ ಚರ್ಮಗಾರಿಕೆಯ ಇತಿಹಾಸ, ಕಾವೇರಿ ನೀರಾವರಿ ನಿಗಮದಿಂದ ಕರುನಾಡಿನ ಜೀವನಾಡಿ ನದಿಗಳಿಂದ ಸಮೃದ್ಧವಾದ ಕರುನಾಡು, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದ (ಕೆಎಸ್ಐಸಿ) ಕರ್ನಾಟಕದ ಹೆಮ್ಮೆಯ ಸಂಕೇತ ಮೈಸೂರು ರೇಷ್ಮೆ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳು.

ಕರ್ನಾಟಕ ಹಾಲು ಮಹಾಮಂಡಳಿಯಿಂದ (ಕೆಎಂಎಫ್) ನಂದಿನಿ ಹಾಲಿನ ಶುಭ್ರತೆ... ನೀಡಿದೆ ರೈತ ಪರಿವಾರಕ್ಕೆ ಭದ್ರತೆ ಮತ್ತು ಹೈನೋದ್ಯಮದ ಮೂಲಕ ಮಹಿಳಾ ಸಬಲೀಕರಣ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟರ ಸಮಗ್ರ ಅಭಿವೃದ್ಧಿ- ನಮ್ಮ ಧೈಯ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಕರ್ನಾಟಕ ತಾಂಡಾ ಅಭಿವೃದಿ ನಿಗಮ ಸ್ಥಾಪನೆಯ ಧ್ಯಯೋದ್ದೇಶಗಳು.

ಇತರೆ ಸ್ತಬ್ಧಚಿತ್ರಗಳು:

ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ‘ಡ್ರಗ್ಸ್-ಮುಕ್ತ ಕ್ಯಾಂಪಸ್’ ಅಭಿಯಾನ, ಹಿಂದೂಸ್ತಾನ್ ಏರೊನಾಟಿಕ್ಸ್ ಅಮಿಟೆಡ್ (ಎಚ್ಎಎಲ್) ನಿಂದ ವಿಜಯದ ರನ್‌ ವೇ- ಭಾರತದ ಆಕಾಶಕ್ಕೆ ಎಚ್‌ಎಎಲ್‌ ನ ಶಕ್ತಿ, ಭಾರತ್ ಅರ್ಥ್ ಮೂವರ್ಸ್ ಅಮಿಟೆಡ್ (ಬಿಇಎಂಎಲ್) ನಿಂದ ಆತ್ಮನಿರ್ಭರ ಭಾರತವನ್ನು ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯಲ್ಲಿ, ಭಾರತೀಯ ರೈಲ್ವೆ ಇಲಾಖೆಯಿಂದ ಚಿನಾಬ್ ಸೇತು- ಪಂಬನ್ ಸೇತು ಹಾಗೂ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಕಲಿಕಾ ನ್ಯೂನತೆ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.