ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

| Published : Feb 11 2025, 12:48 AM IST

ಸಾರಾಂಶ

ಕಳೆದ ವರ್ಷವೇ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದರೆ ತನ್ನ ಭರವಸೆಯಂತೆ ಸರ್ಕಾರ ನಡೆಯದೆ ಕಡೆಗಣಿಸಿರುವುದರಿಂದ ಒತ್ತಡದಲ್ಲಿನಾವು ಕೆಲಸ ಮಾಡುವಂತಾಗಿದೆ. ಸರ್ಕಾರ ಕೂಡಲೇ ಸಂಘದ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂಬುದು ಸಂಘದ ಒತ್ತಾಯ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಾಮ ಆಡಳಿತಾಧಿಕಾರಿಗಳ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯಕ್ಕೆ ಗೈರಾಗಿ ತಾಲೂಕು ಕಚೇರಿ ಎದುರು ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕಳೆದ ವರ್ಷವೇ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದರೆ ತನ್ನ ಭರವಸೆಯಂತೆ ಸರ್ಕಾರ ನಡೆಯದೆ ಕಡೆಗಣಿಸಿರುವುದರಿಂದ ಒತ್ತಡದಲ್ಲಿನಾವು ಕೆಲಸ ಮಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಗ್ರಾಮಾಧಿಕಾರಿಗಳ ಬೇಡಿಕೆ

ಇ ಪೌತಿ ಖಾತಾ ಆಂದೋಲನ ಕೈಬಿಡಬೇಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ೩೦ ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ಹೊರಡಿಸಿರುವ ದಂಡನಾ ಆದೇಶವನ್ನು ಹಿಂಪಡೆಯಬೇಕು, ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸಾರ್ ನುಯಮ ೧೬ಎರ ಉಪಖಂಡ ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು, ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ ಕಲ್ಪಿಸಬೇಕು.ವೇತನ ಶ್ರೇಣಿ ನಿಗದಿಪಡಿಸಿ

ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು, ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು, ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಸಂಭವಿಸಿದರೆ ಗ್ರಾಮ ಆಡಳಿತಾಧಿಕಾರಿಗಳ ಕುಟುಂಬಕ್ಕೆ ೫೦ ಲಕ್ಷ ರು.ಗಳ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ೨೩ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಸುರೇಶ್ ಕುಮಾರ್,ಉಪಾಧ್ಯಕ್ಷ ಅಮರೇಶ್, ಶ್ವೇತ, ರಮೇಶ್, ಅವಿನಾಶ್, ಸುಜಾತ, ಅಂಜಲಿ, ಚೇತನ್ ಕುಮಾರ್, ರವಿ, ಯೋಗೇಶ್, ವಿನೋದ್, ನಂದಿನಿ, ಮಧು, ಲಾವಣ್ಯ ಹಾಗೂ ಇತರರು ಇದ್ದರು.