ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
12 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಶಿವಶರಣರ ಚಳವಳಿ ದೇಶಾದ್ಯಂತ ಹಲವು ಶಿವಭಕ್ತರನ್ನು ಕಲ್ಯಾಣದತ್ತ ಸೆಳೆಯುವಲ್ಲಿ ಯಶಸ್ವಿಯಾಗುವ ಜೊತೆಗೆ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳ ಕೇರಿ, ಹಟ್ಟಿಗಳ ಜನರನ್ನು ಒಳಗೊಳ್ಳುವಂತೆ ಮಾಡಿತು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಕಾಯಕ ಶರಣರ ಜಯಂತಿ’ಯನ್ನು ಉದ್ಘಾಟಿಸಿ ಮಾತನಾಡಿದರು.
ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ, ಹೋರಾಟ ಹತ್ತು ಹಲವು ಬದಲಾವಣೆಗಳಿಗೆ ಕಾರಣವಾಯಿತು. ಸಮಸಮಾಜದ ಆಶಯವನ್ನು ಹೊಂದಿದ್ದ ಬಸವಣ್ಣನವರು ನಿರ್ಲಕ್ಷಿತ ಸಮುದಾಯಗಳನ್ನು ಅಪ್ಪಿಕೊಂಡರು ಮತ್ತು ಒಪ್ಪಿಕೊಂಡರು. ಸಾಮಾಜಿಕ ನ್ಯಾಯದ ಪರವಾಗಿದ್ದ ಬಸವಣ್ಣನವರು ಶಿವಶರಣರೆಲ್ಲರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಿದ್ದರು ಎಂದರು.
ಕಲ್ಯಾಣದ ಕ್ರಾಂತಿಗೆ ಹರಳಯ್ಯನವರ ಪಾದರಕ್ಷೆ ಪ್ರಸಂಗವೂ ಕಾರಣವಾಯಿತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಹರಳಯ್ಯ ಮತ್ತು ಮಧುವರಸರ ಮಕ್ಕಳ ಅಂತರ್ಜಾತಿ ವಿವಾಹವೂ ಕಲ್ಯಾಣದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಸೃಷ್ಟಿಸಿತು. ಕಲ್ಯಾಣದ ಕ್ರಾಂತಿಯ ನಂತರ ಶಿವಶರಣರು ನಾನಾ ಕಡೆಗಳಿಗೆ ವಚನಗಳ ಕಟ್ಟುಗಳ ಗಂಟುಗಳೊಂದಿಗೆ ಹೊರಟು ಹೋದರು. ಆದರೂ ಬೆಂಬಿಡದ ಸೈನಿಕರು ಮತ್ತು ಶರಣ ತತ್ವ ವಿರೋಧಿಗಳ ಸಿಕ್ಕ ಸಿಕ್ಕಲ್ಲಿ ಶರಣರ ಮೇಲೆ ದಾಳಿ ಮಾಡಿದರು ಎಂದರು.ಅಂಬೇಡ್ಕರ್ ಮೇಲೆ ಪ್ರಭಾವ
ಅಂದು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ ಮತ್ತು ಸಮಗಾರ ಹರಳಯ್ಯನವರಾದಿಯಾಗಿ ಅನೇಕ ಶಿವಶರಣರು ವಚನಗಳನ್ನು ಸಂರಕ್ಷಿಸದೇ ಹೋಗಿದ್ದರೆ ಸಮಾಜಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ನಷ್ಟವಾಗುತ್ತಿತ್ತು. ಕಾಯಕ ಶರಣರು ನೀಡಿದ ಕೊಡುಗೆಗಳನ್ನು ಇಂದಿನ ಯುವಪೀಳಿಗೆ, ವಿದ್ಯಾರ್ಥಿಗಳು ಅರಿಯಬೇಕು ಮತ್ತು ಸ್ಮರಿಸಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೇಲೆ ಬುದ್ಧ ಮತ್ತು ಬಸವಣ್ಣನವರ ಪ್ರಭಾವದ ನೆರಳನ್ನು ಕಾಣಬಹುದು ಎಂದರು.ಪೆರೇಸಂದ್ರದ ಶಿಕ್ಷಕರು ಹಾಗೂ ವಿಚಾರವಂತರಾದ ಪಿ.ಎಸ್. ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಕಾಯಕ ಶರಣರ ಬಗ್ಗೆ ಉಪನ್ಯಾಸ ನೀಡಿ, ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಮಹತ್ವದ್ದಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದ 12 ನೇ ಶತಮಾನ ಪರಿವರ್ತನೆಯ ಕಾಲ. ಜಾತಿಗಳನ್ನು ನಿರಾಕರಿಸಿದ ಸಂದರ್ಭವೂ ಹೌದು ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನಕಾರ್ಯಕ್ರಮದಲ್ಲಿ ಕಾಯಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಅಧಿಕಾರಿಗಳು ಮತ್ತು ದಲಿತ ಮುಖಂಡರು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಕಾಯಕ ಶರಣರ ಜಯಂತಿ ಅಂಗವಾಗಿ ನಗರಸಭೆಯ ಪೌರಕಾರ್ಮಿಕರಾದ ವಿ.ಮುನಿರಾಜು ಮತ್ತು ಸತ್ಯಮ್ಮ ರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗಾಯನ ಕಲಾವಿದರಾದ ಬಿ.ವಿ.ಆನಂದ್, ಸುದಾ ವೆಂಕಟೇಶ್ ಮತ್ತು ಚಿ.ಮು.ರಮೇಶ್ ವಚನಸಾಹಿತ್ಯ ಗೀತ ಗಾಯನ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾಡಳಿತ ಭವನದ ಸಿಬ್ಬಂದಿ ಹಾಗೂ ದಲಿತ ಸಂಘಟನೆಗಳ ಮುಖಂಡರಾದ ಸು.ದಾ.ವೆಂಕಟೇಶ್, ಬಾಗ್ಯಮ್ಮ, ಶ್ರೀನಿವಾಸಯ್ಯ, ಕೇಶವ,ತಿಪ್ಪೇನಹಳ್ಳಿ ನಾರಾಯಣ್, ಗುಡಿಬಂಡೆ ಮಂಜು, ಎನ್. ಶ್ರೀನಿವಾಸ್, ನಾರಾಯಣಸ್ವಾಮಿ, ವೆಂಕಟ್ ಮತ್ತಿತರು ಇದ್ದರು.