ಕನ್ನಡಪ್ರಭ ವಾರ್ತೆ ಕಾರವಾರ

ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಹಕ್ಕುಗಳ ರಕ್ಷಣೆ ಸೇರಿ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಆ. 24ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸಂಘದ ಅಧ್ಯಕ್ಷರ ಕರೆಯ ಮೇರೆಗೆ ನಡೆಯಲಿರುವ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಸಹಾಯಕರು ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಧರಣಿಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಗ್ರಾಮ ಸಹಾಯಕರಿಗೆ ಕೇಂದ್ರಸ್ಥಾನದಿಂದ ಹೊರಡಲು ಅನುಮತಿ ನೀಡುವಂತೆ ಜಿಲ್ಲಾ ಗ್ರಾಮ ಸಹಾಯಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಪ್ರಮೋದ್ ನಾಯ್ಕ ಮನವಿ ಸ್ವೀಕರಿಸಿದರು.

ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ವಿವಿಧ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ರಾಜ್ಯ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಆ. 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಧರಣಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಸಹಾಯಕರು ಭಾಗವಹಿಸಲಿದ್ದಾರೆ. ಗ್ರಾಮ ಸಹಾಯಕರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಂಘದ ಪ್ರಮುಖ ಒತ್ತಾಯವಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಸಹಾಯಕರು ಧರಣಿ ಹಾಗೂ ಮುಷ್ಕರದಲ್ಲಿ ಭಾಗವಹಿಸಲು ಕೇಂದ್ರಸ್ಥಾನ ಬಿಡಲು ಅಗತ್ಯ ಅನುಮತಿ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ಈ ವೇಳೆ ರಾಜ್ಯ ಸಂಘದಿಂದ ನೀಡಲಾಗಿರುವ ಕರಪತ್ರ ಹಾಗೂ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳ ಮನವಿ ಪತ್ರದ ಪ್ರತಿಗಳನ್ನೂ ಅಧಿಕಾರಿಗಳಿಗೆ ಸಲ್ಲಿಸಲಾಯಿತು.

ಗ್ರಾಮ ಸಹಾಯಕರ ಹಕ್ಕುಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಗ್ರಾಮ ಸಹಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಂಘದ ಮಾಸ್ತಯ್ಯ ನಾಯ್ಕ ತಿಳಿಸಿದ್ದಾರೆ.

ಗ್ರಾಮ ಸಹಾಯಕರಾದ ದೇವೇಂದ್ರ ನಾಯ್ಕ ಶಿರಸಿ, ಸತೀಶ್ ನಾಯ್ಕ ಹೊನ್ನಾವರ, ಹರ್ಷ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು.