ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮುಂಡಗದೊರೆ ಗ್ರಾಮದ ಜಮೀನಿನ ಬಳಿ ಅಕ್ರಮ ಕಲ್ಲು ಕೋರೆ ನಡೆಸುತ್ತಿದ್ದು, ಧೂಳಿನಿಂದ ಜಮೀನುಗಳ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಮುಂಡುಗದೊರೆ ಗ್ರಾಮದ ರೈತ ವೀರಭದ್ರಯ್ಯ ಭೂಮಿತಾಯಿ ಹೋರಾಟ ಸಮಿತಿಯೊಂದಿಗೆ ಡಿವೈಎಸ್‌ಪಿ ಶಾಂತ ಮಲ್ಲಪ್ಪ ಅವರಿಗೆ ದೂರು ನೀಡಿದರು.ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ, ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಡಿವೈಎಸ್‌ಪಿ ಕಚೇರಿಗೆ ತೆರಳಿ ಡಿವೈಎಸ್‌ಪಿ ಅವರಿಗೆ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಗ್ರಾಮದ ಸರ್ವೇ ನಂ.351ರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ತೆಂಗು, ಬಾಳೆ ಜೊತೆಗೆ ಇತರ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಪಕ್ಕದಲ್ಲಿ ಸರ್ಕಾರಿ ಜಮೀನಿದ್ದು, ಇದರಲ್ಲಿ ಕಲ್ಲು ಕೊರೆದು, ಬ್ಲಾಸ್ಟ್ ಮಾಡಿ ಅಕ್ರಮವಾಗಿ ಗಣಿಕಾರಿಕೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ಲಾಸ್ಟ್ ನಿಂದ ಬರುವ ಶಬ್ದಕ್ಕೆ ಮರಗಿಡಗಳು ನೆಲ್ಲೆ ಉರುಳುತ್ತಿದ್ದು, ಜೊತೆಗೆ ಗಣಿಗಾರಿಕೆ ನಡೆಸುತ್ತಿರುವುದರಿಂದ ಬರುವ ಧೂಳು ಬೆಳೆಗಳ ಮೇಲೆ ಕುಳಿತು ಬೆಳೆ ನಷ್ಟವಾಗುತ್ತಿದೆ. ಅಲ್ಲಾಪಟ್ಟಣ ರಾಜೇಶ್ ಹಾಗೂ ನೀಲನಕೊಪ್ಪಲು ನಿಂಗೇಗೌಡ ಎಂಬುವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವ ಇವರನ್ನು ಕೇಳಿದರೆ ಬೆದರಿಕೆ ಒಡ್ಡುತ್ತಿದ್ದು, ಕೂಡಲೇ ನಮಗೆ ರಕ್ಷಣೆ ನೀಡಿ ಜೊತೆಗೆ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಭೂಮಿತಾಯಿ ಹೋರಾಟ ಸಮಿತಿ ಹಿರಿಯ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಅಕ್ರಮ ಗಣಿಗಾರಿಕೆ ತಲೆ ಎತ್ತಿದ್ದು, ಸ್ಥಳೀಯ ತಾಲೂಕು ಆಡಳಿತ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಗಣಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸಂಬಂಧ ಇಲ್ಲವೆಂಬಂತೆ ಗಣಿ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಡಿವೈಎಸ್‌ಪಿ ಶಾಂತ ಮಲ್ಲಪ್ಪರನ್ನು ಆಗ್ರಹಿಸಿದರು.ಬಳಿಕ ಡಿವೈಎಸ್‌ಪಿ ಶಾಂತ ಮಲ್ಲಪ್ಪ ಮಾತನಾಡಿ, ನೀವು ಹೇಳಿರುವ ದೂರಿನ ಮೂಲಕ ಸ್ಥಳ ಪರಿಶೀಲಿಸಿ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿಮ್ಮ ಜಮೀನಿನ ಅಜುಬಾಜಿನಲ್ಲಿ ಗಣಿಗಾರಿಕೆ ನಡೆಸುವವರನ್ನು ಠಾಣೆಗೆ ಕರೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಸಮಿತಿ ಖಜಾಂಚಿ ಮಹದೇವಪುರ ಕೃಷ್ಣ, ಉಂಡವಾಡಿ ಮಹದೇವು, ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))