ಮಹಿಳೆಯರ ಮೇಲಿನ ದೌರ್ಜನ್ಯ ಕೊನೆಯಾಗಬೇಕು: ಮಹಾಂತೇಶ್

| Published : Jan 12 2024, 01:46 AM IST

ಸಾರಾಂಶ

ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯ ಕೊನೆಗಾಣಿಸಬೇಕು

ಹಿರಿಯೂರು: ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯ ಕೊನೆಗಾಣಿಸಬೇಕು ಎಂದು ಪೌರಾಯುಕ್ತ ಎಚ್.ಮಹಾಂತೇಶ್ ಹೇಳಿದರು.

ನಗರ ಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಲಿಂಗತ್ವ ಆಧಾರಿತ ಹಿಂಸಾಚಾರದ ವಿರುದ್ಧದ 30 ದಿನಗಳ ಜಾಗತಿಕ ಅಭಿಯಾನ ಕುರಿತು ಆಯೋಜಿಸಿದ್ದ ಒಂದು ದಿನದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾಗೊಳಿಸಿರುವ ಜಾಗತಿಕ ಅಭಿಯಾನ ಲಿಂಗದ ಆಧಾರದ ಮೇಲೆ ಭಯ, ತಾರತಮ್ಯ ಮತ್ತು ಹಿಂಸಾಚಾರವಿಲ್ಲದ ಜೀವನಕ್ಕೆ ರಚನಾತ್ಮಕವಾಗಿ ಅಡೆತಡೆ ಪರಿಹರಿಸುವ ಮೂಲಕ ಮಹಿಳೆಯರು ಮತ್ತು ಲಿಂಗ ವೈವಿಧ್ಯಮಯ ವ್ಯಕ್ತಿಗಳ ಸಂಸ್ಥೆ ಮತ್ತು ಹಕ್ಕುಗಳನ್ನು ಮುನ್ನಡೆಸುವ ಉದ್ದೇಶವನ್ನು ಹೊಂದಿದೆ.

ಸಮಾಜದ ಎಲ್ಲಾ ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಲಿಂಗ ದೌರ್ಜನ್ಯ ತಡೆಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುವ ಮುಖಾಂತರ ಸಮಾಜದ ಮಹಿಳೆಯರಲ್ಲಿ ಅರಿವು ಮೂಡಿಸಲಾಗುತ್ತದೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ಅಗತ್ಯ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಕೀಲ ಸೈಯದ್ ನವಾಜ್ ಮಾತನಾಡಿ, ಮಹಿಳೆಯರು ಸದೃಢರಾದಾಗ ಮಾತ್ರ ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಹಿಳೆ ಸಮರ್ಥಳಾಗಬೇಕಾದರೆ ಮಹಿಳಾ ಸಬಲೀಕರಣಕ್ಕಾಗಿ ಸ್ವ-ಸಹಾಯ ಗುಂಪುಗಳಿಗೆ ಸಿಗುವ ಸೌಕರ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆರ್ಥಿಕ ಭದ್ರತಾ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಕೃಷ್ಣಮೂರ್ತಿ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಲವಾರು ಸ್ತ್ರೀಶಕ್ತಿ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ಸ್ವಯಂ ಉದ್ಯೋಗ ಮಾಡುವಲ್ಲಿ ಆರ್ಥಿಕ ನೆರವು ನೀಡುತ್ತಿವೆ. ಈ ಸೌಲಭ್ಯಗಳನ್ನು ಪಡೆದುಕೊಂಡು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಕುಟುಂಬದ ಅಭಿವೃದ್ಧಿಗೆ ಪುರುಷರೊಂದಿಗೆ ಕೈಜೋಡಿಸಿ ಎಂದರು.

ನಗರಸಭೆ ಕಚೇರಿಯ ವ್ಯವಸ್ಥಾಪಕಿ ರಹಮತ್ ಉನ್ನೀಸಾ, ಕಾರ್ಯಕ್ರಮದ ವಿಷಯ ನಿರ್ವಾಹಕಿ ಪಿ.ಸರಿತಾ, ಸಮುದಾಯ ಸಂಪನ್ಮೂಲ ವ್ಯಕ್ತಿ ತನುಜಾ ಹಾಗೂ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು, ಸದಸ್ಯರು, ನಗರಸಭಾ ಸಿಬ್ಬಂದಿಗಳು ಹಾಜರಿದ್ದರು.