ಕಾಂಗ್ರೆಸ್ಸಿಗರು ಸನಾತನ ಧರ್ಮ ವಿರೋಧಿಗಳು

| Published : Jan 12 2024, 01:46 AM IST

ಸಾರಾಂಶ

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರನ್ನು ಶ್ರೀರಾಮಮಂದಿರ ಟ್ರಸ್ಟ್‌ನವರು ಆಹ್ವಾನಿಸಿದ್ದಾರೆ. ಬಿಜೆಪಿಯವರು ಆಹ್ವಾನಿಸಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಇದು ದುರ್ದೈವ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ಸಿಗರು ಸನಾತನ ಧರ್ಮವಿರೋಧಿಗಳು. ಧರ್ಮವನ್ನು ವಿರೋಧ ಮಾಡುವ ಮೂಲಕ ಕಾಂಗ್ರೆಸ್ ತನ್ನಿಂತಾನೇ ಪತನವಾಗುತ್ತಿದೆ. ಅವರ ವಿನಾಶವನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಟೀಕಿಸಿದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರನ್ನು ಶ್ರೀರಾಮಮಂದಿರ ಟ್ರಸ್ಟ್‌ನವರು ಆಹ್ವಾನಿಸಿದ್ದಾರೆ. ಬಿಜೆಪಿಯವರು ಆಹ್ವಾನಿಸಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಇದು ದುರ್ದೈವ. ರಾಮಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಲ್ಲ. ಅದು ಸಾಧು-ಸಂತರ ಕಾರ್ಯಕ್ರಮ. ಇದು ನಮ್ಮ ಮನೆಯ ಕಾರ್ಯಕ್ರಮವಲ್ಲ. ಇಡೀ ದೇಶದ ಹಿಂದೂಗಳ ಕಾರ್ಯಕ್ರಮ. ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕರು ಆಹ್ವಾನಿಸುವ ಅಗತ್ಯವಿಲ್ಲ ಎಂದು ನೇರವಾಗಿ ಹೇಳಿದರು. ರಾಮರಾಜ್ಯ ನಿರ್ಮಾಣ ರಾಮನ ಕನಸು. ಅದನ್ನು ನಾವೆಲ್ಲರೂ ನನಸು ಮಾಡಬೇಕಿದೆ. ಆದರೆ, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ಧರಾಮಯ್ಯ ಇಂಥವರು ಸೇರಿ ಒಂದು ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕಲು ಯೋಜಿಸುತ್ತಿದ್ದಾರೆ. ಇದಕ್ಕೆ ಮುಂದೆ ಅವರೇ ಪಶ್ಚಾತಾಪ ಪಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಹಿಂದೂಗಳನ್ನು ನಿರ್ಲಕ್ಷಿಸಿ ಒಂದು ಜನಾಂಗದ ಪರ ನಿಂತಿದ್ದರಿಂದಲೇ ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸೀಟ್ ಕೂಡ ಗೆಲ್ಲಲು ಆಗಿಲ್ಲ ಎಂದು ಛೇಡಿಸಿದರು.