ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು. ಇಂದಿಗೂ ನಮ್ಮ ಸಂಸ್ಥೆಯಲ್ಲಿ ಶೇ.೯೦ರಷ್ಟು ರೈತರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ಟಾಪರ್‌ಗಳನ್ನು ನೀಡಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದರು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲಾ ಮಟ್ಟದ ಟಾಪರ್ ಪವನ್, ಶಾಲೆ ಹಳೆ ವಿದ್ಯಾರ್ಥಿನಿ ಹೆಚ್.ಆರ್. ಜೀವಿತ ತಮ್ಮ ಕಲಿಕಾ ಅನುಭವವನ್ನು ಹಂಚಿಕೊಂಡು, ಗುರಿ, ಸಮಯದ ಸದ್ಬಳಕೆ ಮತ್ತು ಆತ್ಮವಿಶ್ವಾಸ ಯಶಸ್ಸಿನ ಮೂಲಮಂತ್ರ ಎಂದರು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕ ಬೇಳೂರು ಗ್ರಾಮದ ವಿವೇಕ್ ರಾಚಪ್ಪ ರ‍್ಯಾಪ್ ಸಾಂಗ್‌ಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಾದ ರಾಮಚಂದ್ರ, ಚಂಗಪ್ಪ, ಶ್ರೀಹರಿ, ಪ್ರಾಂಶುಪಾಲರಾದ ಮಿಲ್ಟ್ರೆಡ್‌ ಗೊನ್ಸಾಲ್ವೆಸ್‌, ಲಾಂಛನ್ ಕಾರೇಕರ್, ರಜಿತ್ ಗಾಂಧಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ದಿಶಿತಾ, ತೇಜಸ್, ಹಸಿನಾ, ಧನಲಕ್ಷ್ಮಿ, ಭೂಮಿಕಾ, ಸಾಹಿತ್ಯ, ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಹೊಸ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಬರಮಾಡಿಕೊಂಡರು.