ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಂಟಿ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರು. ವಂಚಿಸಿ, ಬ್ಲ್ಯಾಕ್‌ಮೇಲ್ ಮಾಡಿ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ಮಹಿಳೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಂಟಿ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರು. ವಂಚಿಸಿ, ಬ್ಲ್ಯಾಕ್‌ಮೇಲ್ ಮಾಡಿ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ಮಹಿಳೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಜೀನತ್ ಇಬ್ರಾಹಿಂ ಬಂಧಿತೆ. ಈಕೆ ಮತ್ತು ದೂರುದಾರರು ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಈ ವೇಳೆ ಆರೋಪಿಯ ಮಾತು ನಂಬಿದ ದೂರುದಾರರು ಜಮೀನು ಖರೀದಿಗೆ 70 ಲಕ್ಷ ರು.ಗಳನ್ನು ನೀಡಿದ್ದರು. ಆದರೆ ಆರೋಪಿಯು ಕಚೇರಿಯನ್ನು ಮುಚ್ಚಿದ್ದು ಹಣವನ್ನು ಹಿಂದಕ್ಕೆ ನೀಡದೇ ವಂಚಿಸಿದ್ದಾರೆ ಎಂದು ದೂರುದಾರರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಹಣ ವಾಪಸ್ ಕೇಳಿದಾಗ ಆರೋಪಿಯು ದೂರುದಾರರ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ತನ್ನ ಬಳಿ ದೂರುದಾರರ ಅಶ್ಲೀಲ ವಿಡಿಯೊಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದು ಆರೋಪಿಲಾಗಿದೆ. ಅಲ್ಲದೆ, ದೂರುದಾರರ ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಜೀನತ್ ಇಬ್ರಾಹಿಂನನ್ನು ಪಡುಬಿದ್ರಿ ಕಂಚಿನಡ್ಕದಲ್ಲಿರುವ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಇದೇ ರೀತಿಯ ವಂಚನೆಗೆ ಒಳಗಾಗಿರುವವರು ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.