ಹೈದ್ರಾಬಾದ್ ಕರ್ನಾಟಕ ಮಾದರಿಯಲ್ಲಿ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಅಗತ್ಯ ಅನುದಾನ ಒದಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಇಂಡಿ

ಹೈದ್ರಾಬಾದ್ ಕರ್ನಾಟಕ ಪ್ರದೇಶಗಳ ಜಿಲ್ಲೆಗಳ ಅಭಿವೃದ್ದಿಗೆ 371(ಜೆ ) ಪ್ರಕಾರ ಅಭಿವೃದ್ಧಿ ಮಾಡುತ್ತಿದ್ದು, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಕರೆಯುವ ಈ ವಿಭಾಗದಲ್ಲಿ ಅಭಿವೃದ್ಧಿ ವಂಚಿತ ಅತ್ಯಂತ ಹಿಂದುಳಿದ ಜಿಲ್ಲೆ, ತಾಲೂಕುಗಳು ಇವೆ. ನಂಜುಂಡಪ್ಪ ವರದಿ ಪ್ರಕಾರ ಅಭಿವೃದ್ಧಿ ವಂಚಿತ ಪ್ರದೇಶಕ್ಕೆ ಅವಕಾಶಗಳು ಬೇಕಾಗುತ್ತದೆ. ಹೀಗಾಗಿ ಹೈದ್ರಾಬಾದ್ ಕರ್ನಾಟಕ ಮಾದರಿಯಲ್ಲಿ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಅಗತ್ಯ ಅನುದಾನ ಒದಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದ ಗಮನ ಸೆಳೆದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ₹100, ₹80, ₹90 ಕೋಟಿ ಅಭಿವೃದ್ದಿಗೆ ಅನುದಾನ ಬರುತ್ತಿದೆ. ನಮ್ಮ ಪರಿಸ್ಥಿತಿ ಹೇಗಾಗಿದೆ ಅಂದರೆ, ಮತಕ್ಷೇತ್ರದ ಪಕ್ಕದಲ್ಲಿರುವ ಅಫಜಲಪುರ, ಆಳಂದ, ಜೇವರಗಿ ಮತಕ್ಷೇತ್ರಗಳಲ್ಲಿ ಏನೆಲ್ಲಾ ಅಭಿವೃದ್ಧಿಗಳಾಗುತ್ತಿವೆ. ನಮ್ಮ ಮತಕ್ಷೇತ್ರದಲ್ಲಿ ಮಾತ್ರ ಇರುವುದಿಲ್ಲ. ದುರ್ದೈವಶಾತ ವಿಜಯಪುರ ಜಿಲ್ಲೆಯವರು ಕೋರ್ಟ್‌ಗಾಗಿ ಕಲಬುರಗಿಗೆ ಹೋಗಬೇಕಾಗುತ್ತದೆ. ಕೆಎಸ್ಆರ್‌ಟಿಸಿ ಕಲಬುರಗಿ ವಿಭಾಗಕ್ಕೆ ಬರುತ್ತದೆ. ಕಂದಾಯ ವಿಭಾಗ ಬಂದರೆ ಬೆಳಗಾವಿ ಎನ್ನುವಂತಾಗಿದೆ. ಕಿತ್ತೂರು ಕರ್ನಾಟಕ ಭಾಗದ ಆರೇಳು ಜಿಲ್ಲೆಗಳ ಅತ್ಯಂತ ಹಿಂದುಳಿದ ಯಾವ ಯಾವ ತಾಲೂಕುಗಳು ಇವೆ, ಅವುಗಳಿಗೆ ಅನುಧಾನ ಒದಗಿಸಿ ಅಭಿವೃದ್ಧಿ ಮಾಡಬೇಕು ಎಂಬುದು 16 ವರ್ಷಗಳ ಬೇಡಿಕೆ ಇದೆ. ಇಂಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಯಿಸಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ವಿವರಿಸಿದರು.

ಉತ್ತರ ಕರ್ನಾಟಕದ ಚಿಂತನೆ ಇಟ್ಟುಕೊಂಡು ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಈ ಭಾಗದ ಜನರಿಗೆ ಅಭಿವೃದ್ಧಿ, ಅನುಕೂಲವಾಗಲು ಅವಕಾಶ ಮಾಡಿಕೊಟ್ಟಿದ್ದು, ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಯೋಜನೆ ನಿರ್ಣಯಿಸಿದರೆ, ಐತಿಹಾಸಿಕ ನಿರ್ಣಯವಾಗುತ್ತದೆ. ಅಪ್ಪರ್‌ ಕೃಷ್ಣಾ ಯೋಜನೆಯಲ್ಲಿ ಈ ಪ್ರದೇಶಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಅಪ್ಪರ್ ಕೃಷ್ಣಾ ಯೋಜನೆಯಲ್ಲಿ ಮುಳುಗಡೆಯಾದ ಪ್ರದೇಶದ ರೈತರಿಗೆ ಬಹುದೊಡ್ಡ ಸಹಾಯ ಮಾಡಿದಂತೆ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಒಂದು ಯೋಜನೆ ಮಾಡಿಕೊಟ್ಟರೆ ನಮ್ಮ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ವಿವರಿಸಿದರು.