ಕಡಲಕೆರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ಪ್ರಯುಕ್ತ ಭಾನುವಾರ ಭಜನಾ ಪ್ರೇರಣೋತ್ಸವ-2015 ಸಂಪನ್ನಗೊಂಡಿತು.

ಪ್ರೇರಣಾ ಶಾಲೆಯಲ್ಲಿಶತಸಂಭ್ರಮದ ಭಜನಾ ಪ್ರೇರಣೋತ್ಸವ

ಮೂಡುಬಿದಿರೆ: ಯಕ್ಷಗಾನದಲ್ಲಿ ದೊಂದಿಗೆ ರಾಳ ಎರಚಿದಾಗ ಭಗ್ಗನೆ ಹೊರಹೊಮ್ಮುವ ಬೆಳಕಿನ ಪುಂಜವಾಗಿ ಕಣ್ಣು ಕೋರೈಸುವ ಬದುಕು ನಮ್ಮದಾಗದೆ, ನಿರಂತರವಾಗಿ ದೈವದ ಜೀಟಿಗೆಯಿಂದ ಹೊರಹೊಮ್ಮುವ ಸಾತ್ವಿಕ ಬೆಳಕು ನಮ್ಮದಾಗಬೇಕು ಎಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದ್ದಾರೆ.ಮೂಡುಬಿದಿರೆಯ ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್ ಅಂಗಸಂಸ್ಥೆ ಕಡಲಕೆರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ಪ್ರಯುಕ್ತ ಭಾನುವಾರ ನಡೆದ ಭಜನಾ ಪ್ರೇರಣೋತ್ಸವ-2015ರ ಸಭಾಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ದುಬೈ ಯುಎಇ ಮೊಗವೀರ ಸಂಘದ ಆಧ್ಯಕ್ಷ ಸಿಎ ಲೋಕೇಶ್ ಪುತ್ರನ್ ಮಾತನಾಡಿ, ಕನ್ನಡ ಶಾಲೆ ಎಂಬ ಕೀಳರಿಮೆ ಬೇಡ. ಭಗವದ್ಗೀತೆಯೇ ತನ್ನ ಸಾಧನೆಗೆ ಪ್ರೇರಣೆ ಎಂದರು.ಶಾಲೆಗೆ ಹೆಂಚು ಹೊದೆಸಿ ಪುನರ್ ನಿರ್ಮಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಮಕ್ಕಳ ಸಾಹಿತಿ ದಿ.ಪಳಕಳ ಸೀತಾರಾಮ ಭಟ್ಟರ ಪುತ್ರ, ಶಾಲಾ ಹಳೆ ವಿದ್ಯಾರ್ಥಿ ಸಿಎ ರಘುಪತಿ ಎಸ್. ಭಟ್ ಅವರು ಶಾಲಾ ಸ್ಥಾಪಕ, ಶಿಕ್ಷಕ ಸಾಲ್ವದೊರ್ ಮಾಸ್ತರರು, ತನ್ನ ಸಹಾಧ್ಯಾಯಿ, ಬೆಂಚ್ ಮೇಟ್ ಆಗಿದ್ದು ಈಗ ಆಂಧ್ರ ಪ್ರದೇಶದ ರಾಜ್ಯಪಾಲರಾಗಿರುವ ಸರ್ವೋಚ್ಛ ನ್ಯಾಯಾಲಯದ ಪೂರ್ವ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರ ಒಡನಾಟ ಸ್ಮರಿಸಿದರು.ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮಿಜಾರು ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಉದ್ಯಮಿ ಗಜೇಂದ್ರ ಕುಮಾರ್, ಶಾಲಾ ಹಳೆವಿದ್ಯಾರ್ಥಿಗಳಾದ ವಾಮದ ಪದವು ಕಾಲೇಜಿನ ಪ್ರೊ. ಹರಿ ಕಾರಂತ್, ನೀರ್ಕೆರೆ ಶಾಲೆಯ ಶಿಕ್ಷಕಿ ಯೋಗಿತಾ ನವಾನಂದ, ಸ್ವಾತಿ ವಿಶ್ವಜೀತ್ ಧರ್ಮಸ್ಥಳ ಅತಿಥಿಳಾಗಿದ್ದರು.ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನವಿತ್ತರು. ಚೌಟರ ಅರಮನೆ ಕುಲದೀಪ ಎಂ. ಅಭ್ಯಾಗತರಾಗಿದ್ದರು.ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ರಾಜೇಶ ಬಂಗೇರ ಸ್ವಾಗತಿಸಿದರು. ಶಾಲಾ ಸಂಚಾಲಕ ಶಾಂತರಾಮ ಕುಡ್ವ, ಮುಖ್ಯ ಮಾತಾಜಿ ವತ್ಸಲಾ ರಾಜೇಶ್ ಇದ್ದರು.ದ.ಕ. ಜಿಲ್ಲೆಯ 48 ಭಜನ ತಂಡಗಳು ಎರಡು ತಾಸು ನಡೆದ ಭಜನಾ ಕಮ್ಮಟದಲ್ಲಿ ಪಾಲ್ಗೊಂಡಿದ್ದು ತಂಡಗಳ ಮುಖ್ಯಸ್ಥರನ್ನು, ಮುಖ್ಯನಿರ್ದೇಶಕರಾಗಿ ಸಹಕರಿಸಿದ ಬೆಳುವಾಯಿ ಅಂಬೂರಿ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷ ದಿನಕರ ಕುಲಾಲ್ ಇವರನ್ನು ಗೌರವಿಸಲಾಯಿತು. ರಾಮ್ ಕುಮಾರ್ ಮಾರ್ನಾಡ್ ನಿರೂಪಿಸಿದರು. ಶಾಂತರಾಮ ಕುಡ್ವ ವಂದಿಸಿದರು.

ಅಟೋ ರಿಕ್ಷಾ ಚಾಲಕ ಮಾಲಕರ ಸಂಘ, ನಮೋ ಫ್ರೆಂಡ್ಸ್ ನೆತ್ತೋಡಿ, ಶ್ರೀ ದೇವಿ ಕ್ರಿಕೆಟರ್ಸ್ ಕೊಡ್ಯಡ್ಕ ಮತ್ತಿತರರು ಸಹಕರಿಸಿದರು.