ಕನ್ನಡಪ್ರಭ ವಾರ್ತೆ ಸವದತ್ತಿ ಜಿಲ್ಲಾ ಕೇಂದ್ರವಾಗಲು ಸವದತ್ತಿಯು ಎಲ್ಲ ಅರ್ಹತೆಯನ್ನು ಹೊಂದಿದ್ದು, ಯರಗಟ್ಟಿ, ಬೈಲಹೊಂಗಲ, ಕಿತ್ತೂರ, ರಾಮದುರ್ಗ ತಾಲೂಕುಗಳನ್ನು ಸೇರಿಸಿ ಸವದತ್ತಿಯನ್ನು ಜಿಲ್ಲೆಯನ್ನಾಗಿ ಮಾಡಿದಲ್ಲಿ ಈ ಭಾಗದ ಧಾರ್ಮಿಕ ಕ್ಷೇತ್ರವಾಗಿರುವ ಯಲ್ಲಮ್ಮಾ ದೇವಸ್ಥಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ವಿರುಪಾಕ್ಷ ಮಾಮನಿ ಹೇಳಿ

ಕನ್ನಡಪ್ರಭ ವಾರ್ತೆ ಸವದತ್ತಿ

ಜಿಲ್ಲಾ ಕೇಂದ್ರವಾಗಲು ಸವದತ್ತಿಯು ಎಲ್ಲ ಅರ್ಹತೆಯನ್ನು ಹೊಂದಿದ್ದು, ಯರಗಟ್ಟಿ, ಬೈಲಹೊಂಗಲ, ಕಿತ್ತೂರ, ರಾಮದುರ್ಗ ತಾಲೂಕುಗಳನ್ನು ಸೇರಿಸಿ ಸವದತ್ತಿಯನ್ನು ಜಿಲ್ಲೆಯನ್ನಾಗಿ ಮಾಡಿದಲ್ಲಿ ಈ ಭಾಗದ ಧಾರ್ಮಿಕ ಕ್ಷೇತ್ರವಾಗಿರುವ ಯಲ್ಲಮ್ಮಾ ದೇವಸ್ಥಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ವಿರುಪಾಕ್ಷ ಮಾಮನಿ ಹೇಳಿದರು.

ಪಟ್ಟಣದಲ್ಲಿ ಸವದತ್ತಿ ತಾಲೂಕು ಧಾರವಾಡ ಜಿಲ್ಲೆಗೆ ಸೇರ್ಪಡೆಯ ಹೋರಾಟ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ವಿಭಜನೆ ವಿಚಾರ ಕೈಗೆತ್ತಿಕೊಂಡಾಗ ಸವದತ್ತಿಯನ್ನು ಜಿಲ್ಲಾ ಸ್ಥಾನಕ್ಕೆ ಪರಿಗಣನೆ ಮಾಡಿಕೊಳ್ಳಲೇಬೇಕಿದ್ದು, ಹಾಗೇನಾದರೂ ಸವದತ್ತಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡದಿದ್ದರೆ ಧಾರವಾಡ ಜಿಲ್ಲೆಗೆ ಸವದತ್ತಿಯನ್ನು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು. ಸದ್ಯಕ್ಕೆ ಬೆಳಗಾವಿ ಜಿಲ್ಲಾ ಕೇಂದ್ರವು ನಮಗೆ ದೂರವಾಗಿದ್ದು, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಯಲ್ಲಮ್ಮ ದೇವಸ್ಥಾನ ಸೇರಿದಂತೆ ಸವದತ್ತಿ ವ್ಯಾಪ್ತಿಯಲ್ಲಿ ಮಲಪ್ರಭಾ ಆಣೆಕಟ್ಟು ಹಾಗೂ ಆನೇಕ ಪ್ರವಾಸಿ ತಾಣಗಳಿವೆ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು. ಸರಕಾರವು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸವದತ್ತಿಯನ್ನೇ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿದರು.

ಡಾ.ಎನ್.ಸಿ.ಬೆಂಡಿಗೇರಿ ಮಾತನಾಡಿ, ಈ ಭಾಗದ ಜನರು ದೂರದ ಬೆಳಗಾವಿಗೆ ಹೋಗಿ ಕಚೇರಿ ಕೆಲಸಗಳನ್ನು ನಿರ್ವಹಿಸುವದು ಬಹಳ ಕಷ್ಟದಾಯಕವಾಗಿದೆ. ಸರಕಾರವು ಭೌಗೋಳಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ಸಾರಿಗೆ ಸಂಪರ್ಕದ ವಿಷಯವಾಗಿ ಕೂಲಂಕುಷವಾಗಿ ಅವಲೋಕನ ಮಾಡಿ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಿದೆ. ಆತುರದಲ್ಲಿ ಏನಾದರೂ ತಪ್ಪು ನಿರ್ಧಾರವನ್ನು ತೆಗೆದುಕೊಂಡಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಕರವೇ ಅಧ್ಯಕ್ಷ ಮಹಾದೇವ ಕಿಚಡಿ ಹಾಗೂ ಉಮೇಶ ಭೀಮನ್ನವರ ಮಾತನಾಡಿ, ಬೈಲಹೊಂಗಲ ಜಿಲ್ಲೆ ಮಾಡಲು ಅಲ್ಲಿನ ಶಾಸಕರು ಇದಕ್ಕೆ ಸವದತ್ತಿ ಜನರ ಅನುಮತಿ ಇದೆ ಎಂದು ಮುಖ್ಯಮಂತ್ರಿಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಇದು ನಮಗೆಲ್ಲಾ ಅಸಮಾಧಾನ ಮೂಡಿಸಿದೆ. ನಮ್ಮನ್ನು ಏನೂ ಕೇಳದೆ ಮುಖ್ಯಮಂತ್ರಿಗಳ ಮುಂದೆ ವಿಷಯ ಪ್ರಸ್ತಾಪಿಸಿರುವುದು ಸಮಂಜಸವಲ್ಲ. ಸವದತ್ತಿಯನ್ನೇ ಜಿಲ್ಲೆಯನ್ನಾಗಿಸಿ ಅದರ ವ್ಯಾಪ್ತಿಯಲ್ಲಿ ಉಳಿದ ಅಕ್ಕ ಪಕ್ಕದ ತಾಲೂಕುಗಳನ್ನು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು/ಎಪಿಎಮ್‌ಸಿಯಿಂದ ಪ್ರಾರಂಭಗೊಂಡ ಪ್ರತಿಭಟನೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧ ತಲುಪಿ ಗ್ರೇಡ್-೨ ತಹಸೀಲ್ದಾರ್‌ ಎಮ್.ಎನ್.ಮಠದ ಅವರಿಗೆ ಮನವಿ ಸಲ್ಲಿಸಲಾಯಿತು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಿ.ಬಿ.ದೊಡಗೌಡರ, ಸಿ.ಎಲ್.ಮೊಕಾಶಿ, ಜಗದೀಶ ಶಿಂತ್ರಿ, ಮಲ್ಲಿಕಾರ್ಜುನ ಬೀಳಗಿ, ಡಾ.ಹೇಮಂತ ಭಸ್ಮೆ, ಕುಮಾರಸ್ವಾಮಿ ತಲ್ಲೂರಮಠ, ಅಡಿವೆಪ್ಪ ಬೀಳಗಿ, ಉಮೇಶ ಕೋರಿಕೊಪ್ಪ, ಗಿರೀಶ ಹಂಪಣ್ಣವರ, ಮಲ್ಲಣ್ಣ ವಟ್ನಾಳ, ಮಂಜುನಾಥ ನಿಕ್ಕಂ, ಜಗದೀಶ ಹಂಪಣ್ಣವರ, ಭರಮಪ್ಪ ಅಣ್ಣಿಗೇರಿ, ನಿಂಗಪ್ಪ ಮೀಶಿ, ಸುನೀಲ ಸುಳ್ಳದ, ಉಮೇಶ ಸರದಾರ, ಸೋಮು ಹದ್ಲಿ, ಸಂಗಮೇಶ ಕಳ್ಳಿಮಠ, ಡಾ.ಅಯ್ಯನಗೌಡ ಕಬ್ಬೂರ, ನಾಗರಾಜ ಸೋಗಿ, ಅಲ್ಲಮಪ್ರಭು ಪ್ರಭುನವರ, ನಾಗರಾಜ ಬೋನಗೇರಿ, ನಾರಾಯಣ ಧನ್ಯಾಳ, ಅರವಿಂದ ಇಜಂತಕರ, ಎಮ್.ಎಮ್.ಕಲಾದಗಿ, ಗಿರೀಶ ಬೀಳಗಿ ಇತರರು ಉಪಸ್ಥಿತರಿದ್ದರು.------

ಕೋಟ್‌ಸವದತ್ತಿಯ ಜನರು ಬಹಳ ವರ್ಷಗಳಿಂದ ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಜಿಲ್ಲಾ ವಿಭಜನೆಯ ವಿಚಾರದಲ್ಲಿ ಸವದತ್ತಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ತೀರ್ಮಾಣ ತೆಗೆದುಕೊಳ್ಳಬೇಕಿದೆ. ನಮಗೆ ಧಾರವಾಡ ಜಿಲ್ಲೆ ಅತ್ಯಂತ ಸಮೀಪದಲ್ಲಿರುವದರಿಂದ ಸವದತ್ತಿಯನ್ನು ಜಿಲ್ಲೆಯನ್ನಾಗಿಸಿ ಇಲ್ಲವಾದಲ್ಲಿ ಧಾರವಾಡ ಜಿಲ್ಲೆಗೆ ಸೇರ್ಪಡೆ ಮಾಡಿ. ಈ ಭಾಗದ ಅಭಿವೃದ್ಧಿ ಮತ್ತು ಜನರ ಅನುಕೂಲತೆಗಳಿಗೆ ಸರ್ಕಾರ ಸಹಕಾರ ನೀಡಬೇಕು.ಡಾ.ಅಭಿನಂದನ ಕಬ್ಬಿಣ, ಹೋರಾಟ ಸಮಿತಿಯ ಅಧ್ಯಕ್ಷದರು.