ಸಾರಾಂಶ
ಲೋಕಸಭಾ ಚುನಾವಣೆ 2024-ರ ಸಂಬಂಧ ಜಿಲ್ಲೆಯ ಗಡಿಭಾಗ ಗೋಪಿನಾಥಂ ಗ್ರಾಮದ ಬಳಿ ಹೊಗೇನೆಕಲ್ ನಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್‌ರಿಂದ ಕಾವೇರಿ ದಡದ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಲೋಕಸಭಾ ಚುನಾವಣೆ 2024-ರ ಸಂಬಂಧ ಜಿಲ್ಲೆಯ ಗಡಿಭಾಗ ಗೋಪಿನಾಥಂ ಗ್ರಾಮದ ಬಳಿ ಹೊಗೇನೆಕಲ್ ನಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್‌ರಿಂದ ಕಾವೇರಿ ದಡದ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಮತದಾನ ಜಾಗೃತಿ ಕಾರ್ಯಕ್ರಮಕ್ಕೂ ಮೊದಲು ಗೋಪಿನಾಥಂ ಗ್ರಾಮದ ಮಹಿಳೆಯರು ಗ್ರಾಮದಿಂದ ಹೊಗೇನೆಕಲ್ ಜಲಪಾತದ ದ್ವಾರದ ಮುಂಭಾಗದ ಕಾವೇರಿ ದಡದವರೆಗೆ ಪೂರ್ಣ ಕುಂಭ ಹಿಡಿದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್ ವಸ್ತ್ರದ್ ರನ್ನು ಸ್ವಾಗತಿಸಿದರು.ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಎಲ್ಲರೂ ಏ. 26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ನಿಮ್ಮ ಹೆಸರು ಮತದಾನ ಪಟ್ಟಿಯಲ್ಲಿ ಇರುವ ಬಗ್ಗೆ ಹೆಲ್ಪ್ ಲೈನ್ ಆ್ಯಪ್ ಮುಖಾಂತರ ಖಚಿತಪಡಿಸಿಕೊಳ್ಳಿ. ಚುನಾವಣಾ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸಿ ವಿಜಿಲ್ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಎಲ್ಲರೂ ನ್ಯಾಯ ಸಮ್ಮತ ಮತದಾನ ಮಾಡಿ ಹಾಗೂ ನೈತಿಕ ಮತದಾನ ಬೆಂಬಲಿಸಿ ಎಂದರು. ನಂತರ ಮಾರಿಕೊಟ್ಟಾಯಿ ಮತಗಟ್ಟೆ ಸಂಖ್ಯೆ 141ರಲ್ಲಿ ಮತದಾನದ ಧ್ವಜಾರೋಹಣ ನೆರವೇರಿಸಿ ಬಳಿಕ ಮತಗಟ್ಟೆ ವೀಕ್ಷಣೆ ಮಾಡಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಹಣ, ಹೆಂಡ ಇತರೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು. ಮತದಾನ ನಿಮ್ಮ ಮುಂದಿನ ಪೀಳಿಗೆಗೆ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇದೇ ವೇಳೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹನೂರು ತಾಪಂ ಇಒ ಉಮೇಶ್, ಸಹಾಯಕ ನಿರ್ದೇಶಕ ರವೀಂದ್ರ, ತಾಪಂ, ಗ್ರಾಪಂ ಅಧಿಕಾರಿಗಳು, ನರೇಗಾ ಸಹಾಯಕ ಇಂಜಿನಿಯರ್ ಮತ್ತಿತರರು ಹಾಜರಿದ್ದರು.