ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಯಡಾಡಿ ಮತ್ಯಾಡಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಸೋಮವಾರ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಸಂಜೆ ಕುಂದಾಪುರದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ನೀಡಲಾಯಿತು.

ಆಮಂತ್ರಣ ಪತ್ರಿಕೆ ಸ್ವೀಕರಿಸಿ ಮಾತನಾಡಿದ ಸಚಿವ ಖಾದರ್ ಅವರು ಭಾಷೆಗಳು ಕೇವಲ ಮಾತನಾಡುವುದಕ್ಕೆ ಮಾತ್ರ‌ ಸೀಮಿತವಾಗಬಾರದು. ನಮ್ಮ ಭೌಗೋಳಿಕ ವ್ಯಾಪ್ತಿಯ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪರಂಪರೆಯ ರಾಯಭಾರದಂತಿರಬೇಕು ಎಂದರು.ತಂತ್ರಜ್ಞಾನದ ಯುಗದಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಬೇರುಗಳ ಪರಿಚಯವೂ ಮಕ್ಕಳಿಗೆ ಅಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಸುಜ್ಞಾನ ಎಜುಕೇಶನ್ ಟ್ರಸ್ಟ್‌ನ ಕಾರ್ಯ ಪ್ರಶಂಸನೀಯ ಎಂದರು.ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಅಧ್ಯಯನ ಪೀಠದ ಸದಸ್ಯರಾದ ರಾಜೇಶ್ ಕೆ.ಸಿ., ಉದಯ್ ಶೆಟ್ಟಿ ಪಡುಕರೆ, ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ , ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ, ಎಸ್‌ಐ ನಂಜಾ ನಾಯ್ಕ್‌ ಇದ್ದರು.