ಸಾರಾಂಶ
ತಂತ್ರಜ್ಞಾನದ ಯುಗದಲ್ಲಿ ಅನೇಕ ರೀತಿಯ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಂತಹ ಅಪರಾಧ ಕೃತ್ಯಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಕೂಡ ಒಂದಾಗಿದೆ ಎಂದು ನ್ಯಾಯಾಧೀಶ ಎಸ್.ಕೆ. ಜನಾರ್ದನ ಹೇಳಿದರು.
ಹಾನಗಲ್ಲ: ನ್ಯೂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಹಾನಗಲ್ಲ ಪೊಲೀಸ್ ಠಾಣೆ ಆಶ್ರಯದಲ್ಲಿ "ಮಾನವ ಕಳ್ಳ ಸಾಗಾಣಿಕೆ ತಡೆ ದಿನ " ಅಂಗವಾಗಿ "ಕಾನೂನು ಅರಿವು ನೆರವು " ಕಾರ್ಯಕ್ರಮವನ್ನು ನ್ಯಾಯಾಧೀಶ ಎಸ್.ಕೆ. ಜನಾರ್ದನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಯುಗದಲ್ಲಿ ಅನೇಕ ರೀತಿಯ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಂತಹ ಅಪರಾಧ ಕೃತ್ಯಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಕೂಡ ಒಂದಾಗಿದೆ. ಈ ರೀತಿಯಾಗಿ ಕಳ್ಳಸಾಗಾಣಿಕೆಯಾದ ವ್ಯಕ್ತಿಗಳು, ವಿಶೇಷವಾಗಿ ಹೆಣ್ಣುಮಕ್ಕಳನ್ನು ಕಳ್ಳತನ, ಭಿಕ್ಷಾಟನೆ, ಮಕ್ಕಳನ್ನು ಅಪಹರಿಸುವುದು ಇತ್ಯಾದಿ ಸಮಾಜಘಾತಕ ಚಟುವಟಿಕೆಗೆ ಬಲಿಯಾಗುತ್ತಿದ್ದಾರೆ. ವ್ಯಾಪಕವಾಗಿ ಇಂಥ ಚಟುವಟಿಕೆ ನಡೆಯುತ್ತಿದ್ದು, ಈ ಬಗ್ಗೆ ವಿಶೇಷವಾಗಿ ಯುವಜನತೆ, ವಿದ್ಯಾರ್ಥಿ ಸಮೂಹ ಎಚ್ಚರಿಕೆ ವಹಿಸಬೇಕು. ಇಂಥ ಘಟನೆಗಳು ತಮಗೆ ತಿಳಿದು ಬಂದರೆ ಆ ಕುರಿತು ಸಂಬಂಧಿಸಿದ ಇಲಾಖೆ ಮಾಹಿತಿ ನೀಡಿ, ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಬೇಕು. ಯುವ ಜನತೆ ಕಾನೂನಿನ ಸಮಗ್ರ ಜ್ಞಾನ ಪಡೆದು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ವಕೀಲ ರವಿಬಾಬು ಯು. ಪೂಜಾರ್, ಇಂದು ನೈತಿಕ ಮೌಲ್ಯಗಳು ಅಧಃಪತನವಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಸಂಪೂರ್ಣ ಹಾಳಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯರನ್ನು ಕಳ್ಳತನ ಮಾಡಿ, ಅನೇಕ ಸಮಾಜಘಾತಕ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಇದರ ವಿರುದ್ಧ ನಾವು ಜಾಗ್ರತರಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಇರುವುದರಲ್ಲಿಯೇ ಸಾರ್ಥಕ ಬದುಕು ಕಳೆಯಬೇಕು. ಈ ವಿಚಾರದಲ್ಲಿ ವಿದ್ಯಾವಂತರು ಅಪರಾಧ ಕೃತ್ಯಗಳನ್ನು ಎಸಗದಂತೆ ಪ್ರಜ್ಞಾವಂತರಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಲು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಯುವಜನತೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಅಪರಾಧ ಕೃತ್ಯಗಳನ್ನು ಎಸಗದೆ ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪ್ರಜ್ಞಾವಂತಿಕೆಯಿಂದ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಲು ಕರೆ ನೀಡಿದರು.
ಹಾನಗಲ್ ಪೊಲೀಸ್ ಠಾಣೆ ಸಿಪಿಐ ಆರ್. ವೀರೇಶ್ ಹಾಗೂ ಹಾನಗಲ್ ಸಿಡಿಪಿಒ ನಂದಕುಮಾರ್ ಎಂ.ಆರ್, ಸಂಸ್ಥೆಯ ಉಪಾಧ್ಯಕ್ಷ ಪಿ.ವೈ. ಗುಡುಗುಡಿ, ಪ್ರಭಾರ ಪ್ರಾಚಾರ್ಯರಾದ ಆರ್.ಸಿ. ಜಡೆಗೊಂಡರ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ಎಸ್.ಎಸ್. ಕಾಳಿ, ಪ್ರದೀಪ್ ಕಾಟೆಕರ್, ಮಂಜುನಾಥ ಎಸ್.ಎಲ್., ಎನ್.ಎಸ್. ಗುಂಡೇಗೌಡ, ಆಂಜನೇಯ ಹಳ್ಳಳ್ಳಿ ಪಾಲ್ಗೊಂಡಿದ್ದರು.ಅಕ್ಷತಾ ಕೂಡಲಮಠ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.