ಇದು ಬಸ್‌ ನಿಲ್ದಾಣವೋ...ಕೆಸರು ಗದ್ದೆಯೋ?

| Published : Aug 01 2024, 12:15 AM IST

ಸಾರಾಂಶ

2021ರಲ್ಲಿ ಉದ್ಘಾಟನೆಗೊಂಡಿರುವ ಹೊಸೂರು ಬಸ್‌ ನಿಲ್ದಾಣ ಮೂರೇ ಮೂರು ವರ್ಷದಲ್ಲಿ ತನ್ನ ಅಂದವನ್ನೆಲ್ಲ ಕಳೆದುಕೊಂಡಿದೆ. ಎಲ್ಲೆಂದರಲ್ಲಿ ಬಿಸಾಕಿರುವ ಕಸವನ್ನು ತೆರವುಗೊಳಿಸಿ ತಿಂಗಳೇ ಕಳೆದಿವೆ. ಹೊರಗಿನಿಂದ ನೋಡಿದರೆ ಸುಂದರವಾಗಿ ಕಾಣುವ ಬಸ್‌ ನಿಲ್ದಾಣದ ಅವ್ಯವಸ್ಥೆ ಒಳಹೋದಂತೆ ದರ್ಶನವಾಗುತ್ತದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಉದ್ಘಾಟನೆಗೊಂಡ ಮೂರೇ ವರ್ಷದಲ್ಲಿ ಇಲ್ಲಿನ ಹೊಸೂರಿನಲ್ಲಿ ನಿರ್ಮಿಸಲಾದ ಪ್ರಾದೇಶಿಕ ಸಾರಿಗೆ, ನಗರ ಸಾರಿಗೆ ಮತ್ತು ಬಿಆರ್‌ಟಿಎಸ್‌-ಇಂಟರ್‌ ಚೇಂಜ್‌ ನಿಲ್ದಾಣ (ಹೊಸೂರು ಬಸ್‌ ನಿಲ್ದಾಣ) ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಭೇಟಿ ನೀಡುವ ಪ್ರಯಾಣಿಕರ ಬಾಯಲ್ಲಿ ಬರುವ ಮಾತು ಇದು ಬಸ್‌ ನಿಲ್ದಾಣವೋ... ಕೆಸರು ಗದ್ದೆಯೋ? ಎಂದು.

2021ರಲ್ಲಿ ಉದ್ಘಾಟನೆಗೊಂಡಿರುವ ಹೊಸೂರು ಬಸ್‌ ನಿಲ್ದಾಣ ಮೂರೇ ಮೂರು ವರ್ಷದಲ್ಲಿ ತನ್ನ ಅಂದವನ್ನೆಲ್ಲ ಕಳೆದುಕೊಂಡಿದೆ. ಎಲ್ಲೆಂದರಲ್ಲಿ ಬಿಸಾಕಿರುವ ಕಸವನ್ನು ತೆರವುಗೊಳಿಸಿ ತಿಂಗಳೇ ಕಳೆದಿವೆ. ಹೊರಗಿನಿಂದ ನೋಡಿದರೆ ಸುಂದರವಾಗಿ ಕಾಣುವ ಬಸ್‌ ನಿಲ್ದಾಣದ ಅವ್ಯವಸ್ಥೆ ಒಳಹೋದಂತೆ ದರ್ಶನವಾಗುತ್ತದೆ.

ಎರಡೂ ಕಡೆನೂ ಸಮಸ್ಯೆ:

ಈ ಬಸ್ ನಿಲ್ದಾಣಕ್ಕೆ ಎರಡೂ ಕಡೆಗಳಲ್ಲಿ ಪ್ರವೇಶದ್ವಾರ ಮಾಡಲಾಗಿದೆ. ಹೊಸೂರು ಕ್ರಾಸ್‌ನಿಂದ ಧಾರವಾಡಕ್ಕೆ ತೆರಳುವ ಕಡೆ ಮತ್ತೊಂದು ಹೊಸ ಕೋರ್ಟ್ ಕಡೆ ಹೀಗೆ ಎರಡು ಕಡೆಗಳಲ್ಲಿ ಪ್ರವೇಶ ದ್ವಾರ ಮಾಡಲಾಗಿದೆ. ಆದರೆ, ಎರಡೂ ಕಡೆಗಳಲ್ಲಿ ಪ್ರಯಾಣಿಕರು ಬಸ್‌ ನಿಲ್ದಾಣದ ಒಳಗೆ ಹೋಗಲು ಪರದಾಡುವ ಪರಿಸ್ಥಿತಿಯಿದೆ.

ವೃದ್ಧರಿಗೆ ನರಕಯಾತನೆ:

ಬಸ್ ನಿಲ್ದಾಣದೊಳಗೆ ಬಂದು ಗ್ರಾಮೀಣ ಬಸ್‌ಗಳ ಕಡೆ ಹೋಗಲು ವೃದ್ಧರಿಗೆ ಮತ್ತು ಅಂಗವಿಕಲರಿಗೆ ತುಂಬಾ ಕಷ್ಟವಾಗುತ್ತಿದೆ. ಮೇಲಿನ ಅಂತಸ್ತಿಗೆ ಹೋಗಲು ನಿಲ್ದಾಣದಲ್ಲಿ ಲಿಫ್ಟ್ ಮಾಡಲಾಗಿದೆ. ಇದು ಕೆಟ್ಟುಹೋಗಿ ವರ್ಷವೇ ಕಳೆದಿದೆ. ಆದರೆ, ದುರಸ್ತಿ ಮಾತ್ರ ಇಂದಿಗೂ ಆಗಿಲ್ಲ. ಹಾಗಾಗಿ ವೃದ್ಧರು, ಅಂಗವಿಕಲರು, ಅನಾರೋಗ್ಯ ಪೀಡಿತರು, ಮಹಿಳೆಯರು ಬಸ್‌ ನಿಲ್ದಾಣಕ್ಕೆ ಹೋಗಲು ನರಕಯಾತನೆ ಅನುಭವಿಸುತ್ತಿದ್ದಾರೆ.

ನಿಲ್ದಾಣದೊಳಗೆ ಹೋಗಲು ನಿರ್ಮಿಸಲಾಗಿರುವ ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಪ್ರಯಾಣಿಕರು ಗುಟ್ಕಾ, ತಂಬಾಕು, ಎಲೆ, ಅಡಕೆ ಉಗುಳಿ ಅಂದವನ್ನೇ ಹಾಳು ಮಾಡಿದ್ದಾರೆ. ನಿಲ್ದಾಣದೊಳಗೆ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದೆ.

ಕೆಸರುಗದ್ದೆಯಂತಾದ ಪ್ಲಾಟ್‌ಫಾರ್ಮ್:

ಕಳೆದ 10-15 ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್‌ ನಿಲ್ದಾಣ ಕೆಸರುಗದ್ದೆಯಂತಾಗಿವೆ. ಬಸ್‌ ನಿಲ್ದಾಣದಲ್ಲಿ ಒಟ್ಟು 12 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ 1, 2, 5, 6, 9, 10ನೇ ಪ್ಲಾಟ್‌ ಫಾರ್ಮ್‌ನಲ್ಲಿ ಕಳೆದ 10-15 ದಿನಗಳಿಂದ ಒಂದು ಅಡಿಗೂ ಹೆಚ್ಚು ನೀರು ನಿಂತು ಪ್ಲಾಟ್‌ಫಾರ್ಮ್ ಸಂಪೂರ್ಣವಾಗಿ ಕೆಸರುಗದ್ದೆಯಂತಾಗಿದೆ. ಪ್ರಯಾಣಿಕರು ಇದೇ ನೀರಿನಲ್ಲಿ ಕಾಲಿಟ್ಟು ಬಸ್‌ ಹತ್ತುವಂತಾಗಿದೆ. ಒಂದೇ ವಾರದಲ್ಲಿ ಈ ನೀರಿನಲ್ಲಿ 4 ಪ್ರಯಾಣಿಕರು ಕಾಲುಜಾರಿ ಬಿದ್ದು ತೊಂದರೆ ಅನುಭವಿಸಿದ್ದಾರೆ.

ಎಲ್ಲೆಲ್ಲಿ ಸಮಸ್ಯೆ:

ವಿಜಯಪುರ, ಬಾಗಲಕೋಟ, ಇಳಕಲ್ಲ, ರೋಣ, ಬಾದಾಮಿ, ಸವದತ್ತಿ, ರಾಮದುರ್ಗ, ಸೊಲ್ಲಾಪುರ, ಓರಂಗಾಬಾದ, ಅಥಣಿ, ಗೋಕಾಕ್‌, ಕಲಘಟಗಿ, ನವಲಗುಂದ ಸೇರಿದಂತೆ ಹಲವು ನಗರ ಮತ್ತು ಪಟ್ಟಣಗಳಿಗೆ ತೆರಳುವ ಬಸ್‌ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರು ಬಯ್ಯುತ್ತಾ ಇದೇ ಕೊಳಚೆ ನೀರಿನಲ್ಲಿ ಕಾಲಿಡುತ್ತಾ ಬಸ್‌ ಹತ್ತುವಂತಾಗಿದೆ.

ಇದ್ದೂ ಇಲ್ಲದಂತಾಗಿರುವ ಸುರಂಗ ಮಾರ್ಗ:

ಪ್ರಯಾಣಿಕರಿಗೆ ಅನಕೂಲವಾಗಲಿ ಎಂಬ ಉದ್ದೇಶದಿಂದ ಹೊಸೂರು ಬಸ್‌ ನಿಲ್ದಾಣದಲ್ಲಿ ಹೊಸ ಕೋರ್ಟ್‌ ಕಡೆಯಿಂದ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗಾಗಿ ಸುಂದರವಾಗಿರುವ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಆದರೆ, ಇದನ್ನು ಪ್ರಯಾಣಿಕರು ಬಳಕೆ ಮಾಡದ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಬಂದ್‌ ಮಾಡಲಾಗಿದ್ದು, ಅಲ್ಲಿ ಕಸ ಸಂಗ್ರಹಗೊಂಡಿದೆ. ರಾತ್ರಿ ಇದು ಕುಡುಕರ ತಾಣವಾಗಿ ಮಾರ್ಪಟ್ಟಿದೆ.

ಇದು ಬಸ್‌ ನಿಲ್ದಾಣವೋ ಕೆಸರು ಗದ್ದಿನೊ ಒಂದೂ ತಿಳಿವಲ್ದು, ಬಸ್‌ ನಿಂತೈತಿ ಜಲ್ದಿ ಹೋಗಿ ಬಸ್‌ ಹತ್ತಾಕೂ ಆಗಲಾರದಂಗ ಆಗೈತ್ರಿ. ನಮ್ಮಂತ ವಯಸ್ಸಾದವರು ಈ ಬಸ್‌ ಸ್ಟ್ಯಾಂಡ್‌ದಾನ ಬಸ್‌ ಹತ್ತಿ ಹೋಗೋದು ಯುದ್ದ ಆಡಿದಂಗ ಆಗೈತ್ರಿ ಎಂದು ಕಲಘಟಗಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವೃದ್ಧೆ ಹನುಮವ್ವ ವಡ್ಡರ ಹೇಳಿದರು.

ಹೊಸೂರು ಬಸ್‌ ನಿಲ್ದಾಣದ ಹೊರಗಿರುವ ಮುಖ್ಯ ಒಳಚರಂಡಿ ಬಂದಾಗಿರುವುದರಿಂದ ಈ ಸಮಸ್ಯೆಯಾಗಿದೆ. ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈವರೆಗೂ ದುರಸ್ತಿಗೊಳಿಸಿಲ್ಲ. ಬಸ್‌ ನಿಲ್ದಾಣದೊಳಗೆ ಸ್ವಚ್ಛತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಹೇಳಿದರು.