ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೈತನ ಬೆವರಿನ ಪ್ರತೀಕವಾದ ಅನ್ನವನ್ನು ಅಪವ್ಯಯ ಮಾಡುವುದು ಘೋರ ಪಾಪದ ಕಾರ್ಯ ಎಂದು ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸಾಮೀಜಿ ಹೇಳಿದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಶಿವಶರಣ ಬಿಬ್ಬಿ ಬಾಚಯ್ಯನವರ ಜಯಂತಿಯ ಸಮ್ಮುಖ ವಹಿಸಿ ಮಾತನಾಡಿದರು. ಯಾವುದನ್ನೇ ಆಗಲಿ ನಾವು ನಕಲಿ ಮಾಡಬಹುದು. ಆದರೆ ಅನ್ನ ಅಥವಾ ಶರಣರ ಪಾರಿಭಾಷಿಕ ಭಾಷೆಯಲ್ಲಿ ಹೇಳುವುದಾದರೆ ಪ್ರಸಾದವನ್ನು ನಕಲಿ ಮಾಡಲು ಬರುವುದಿಲ್ಲ. ಅದಕ್ಕೆ ರೈತನ ಬೆವರಿನ ಶ್ರಮವಿದೆ. ಅಂತಹ ಪ್ರಸಾದ ನಮಗೆ ಪ್ರಸನ್ನತೆಯನ್ನು ನೀಡುತ್ತದೆನ್ನುವ ಕಾರಣಕ್ಕೆ 12ನೇ ಶತಮಾನದ ಬಸವಾದಿ ಶಿವಶರಣರ ಸಂಕುಲದಲ್ಲಿ ಅದು ಶ್ರೇಷ್ಠ ಕುಲ ಎನ್ನುತ್ತೇವೆ. ಆ ಜಾತಿಯಿಂದ ಬಂದ ಅಗ್ರಹಾರದ ಬಿಬ್ಬಿ ಬಾಚಯ್ಯನವರು ತನ್ನ ಕುಲದ ಅಹಂಮಿಕೆಯನ್ನು ತೊರೆದು ಕಂತೆ ಭಿಕ್ಷೆ ಮಾಡಿ ಪ್ರಸಾದ ಶೇಖರಣೆ ಮಾಡಿ ದಾಸೋಹ ಮಾಡುವ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಅನ್ನದೇವರ ಮುಂದೆ ಇನ್ನು ದೇವರುಂಟೆ ಎನ್ನುವಂತೆ ಅನ್ನಕ್ಕೆ ನಮಗೆ ಚೈತನ್ಯ ನೀಡುವ ಶಕ್ತಿ ಇದೆ. ಇಂತಹುದನ್ನು ಬೆಳೆವ ರೈತ ಪ್ರತಿದಿನವೂ ಶ್ರಮ ವಹಿಸಿ ದುಡಿದು ನಾಡಿನ ಜನರಿಗೆ ನೀಡುತ್ತಾನೆ. ಇಂದು ಊಟದ ತಟ್ಟೆಯಲ್ಲಿ ಹೆಚ್ಚಿಗೆ ನೀಡಿಸಿಕೊಂಡು ಎಲೆ ಅಥವಾ ತಟ್ಟೆಯಲ್ಲಿ ಬಿಡುವುದು ಕೆಲವರಿಗೆ ಪ್ರತಿಷ್ಠೆಯಾಗಿದೆ. ಇದು ನಾವು ರೈತರಿಗೆ, ಅನ್ನಕ್ಕೆ ಅಥವಾ ಧಾನ್ಯಕ್ಕೆ ಮಾಡುವ ಘೋರ ಅನ್ಯಾಯ ಎಂದರೂ ತಪ್ಪಲ್ಲ. ಅನ್ನದ ಬೆಲೆ ಹಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅಂತಹ ಪ್ರಸಾದವನ್ನು ಹಾಳು ಮಾಡುವುದುಬೇಡ ಎಂದರು.ಶಿವಶರಣ ಬಿಬ್ಬಿ ಬಾಚಯ್ಯನವರ ಬಗ್ಗೆ ವಿಷಯಾವಲೋಕನ ಮಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೂಪೇಶ್‌ಕುಮಾರ್ ಆರ್. ಮಾತನಾಡಿ ಬಿಬ್ಬಿ ಬಾಚಯ್ಯನವರು ಹಿರಿಯ ಶಿವಶರಣರಾಗಿದ್ದುಕೊಂಡು ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತಿಶ್ರೇಷ್ಠ ಜಾತಿ ಎನಿಸಿದ ಕುಲದಲ್ಲಿ ಹುಟ್ಟಿ ಬಸವಣ್ಣನವರ ದಾಸೋಹ ಕಲ್ಪನೆಯ ಮಹಾಕಾರ್ಯಕ್ಕೆ ಮನಸೋತು ತನ್ನ ಪೂರ್ವಕುಲದ ಎಲ್ಲವನ್ನು ತೆಗೆದು ಶರಣತಿಂಥಿಣಿಯಲ್ಲಿ ಭಾಗವಹಿಸಿ ಪ್ರಸಾದ ಹಂಚುವ ಕಾಯಕದಲ್ಲಿ ನಿರತರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಮುರುಘಾಮಠದ ಬಸವ
ಮುರುಘೇಂದ್ರ ಸ್ವಾಮೀಜಿ, ಡಾ. ಬಸವಚೇತನ ಶ್ರೀಗಳು ಸೇರಿದಂತೆ ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳಾದ ಸವಿತಾ ಶ್ರೀನಿವಾಸ್, ಜಿ.ಟಿ. ನಂದೀಶ್, ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಬೆಂಗಳೂರಿನ ನಿವಾಸಿಗಳಾದ ನಿವೃತ್ತ ಅಧಿಕಾರಿಗಳಾದ ಆರ್.ಎಸ್. ಜಯಪ್ರಕಾಶ್, ಕೃಷ್ಣಶಾಸ್ತ್ರೀ, ಜೆ.ಎಸ್. ಮುರುಘೇಶ್, ಮತ್ತಿತರರು ಭಾಗವಹಿಸಿದ್ದರು.