ಸಾರಾಂಶ
- ರಸ್ತೆ ಅಗಲೀಕರಣ ಹಿನ್ನೆಲೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ , ಮುಖಂಡರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣದ ರಸ್ತೆ ಅಗಲೀಕರಣಕ್ಕಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ 60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿರುವುದರಿಂದ ಪ್ರತಿಯೊಬ್ಬರೂ ಒಟ್ಟಾಗಿ ಯಾವುದೇ ಅಪಸ್ವರ ಬಾರದಂತೆ ಸಹಕಾರ ನೀಡಬೇಕಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಸಲಹೆ ನೀಡಿದರು.
ಶನಿವಾರ ಪ್ರವಾಸಿ ಮಂದಿರದಲ್ಲಿ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಪ್ರವಾಸಿ ಮಂದಿರದಿಂದ ಸುಂಕದಕಟ್ಟೆವರೆಗೆ ರಸ್ತೆ ಅಗಲೀಕರಣವಾಗಲಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೂಲಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿರುವುದು ನರಸಿಂಹರಾಜಪುರ ಜನತೆ ಭಾಗ್ಯ. ಇಂತಹ ಅವಕಾಶ ಮುಂದೆ ಸಿಗುವುದಿಲ್ಲ. ಎಂ.ಶ್ರೀನಿವಾಸ್ ಹುಟ್ಟೂರಿನ ಪ್ರೀತಿಗೆ ಈಗಾಗಲೇ ಹೊನ್ನೇಕೊಡಿಗೆ- ನರಸಿಂಹರಾಜಪುರ ಸಂಪರ್ಕ ರಸ್ತೆಗೆ ₹35 ಕೋಟಿ ರು. ಮಂಜೂರು ಮಾಡಿಸಿದ್ದಾರೆ. ಸೇತುವೆಯಿಂದ ಪಟ್ಟಣಕ್ಕೆ ಬರಲು ಸುಸಜ್ಜಿತ ರಸ್ತೆಗಾಗಿ ₹5 ಕೋಟಿ ಕಡಹಿನಬೈಲು ಏತ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ ₹15 ಕೋಟಿ ರು. ಮಂಜೂರು ಮಾಡಿಸಿದ್ದಾರೆ. ಈ ಹಿಂದೆ ನರಸಿಂಹರಾಜಪುರದ ಪ್ರವಾಸಿ ಮಂದಿರಕ್ಕೆ ಹಣ ಮಂಜೂರು ಮಾಡಿಸಿದ್ದು ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಾಣವಾಗಿದೆ. ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ವಿಳಂಬವಾಗುತ್ತಿದ್ದು ಇದರ ವೇಗಕ್ಕಾಗಿ ಪ್ರಯತ್ನಿ ಸುತ್ತಿದ್ದಾರೆ. ಅಲ್ಲದೆ ಮುತ್ತಿನಕೊಪ್ಪ ಭಾಗದ ತುಂಗಾ ನದಿಯಿಂದ ನರಸಿಂಹರಾಜಪುರಕ್ಕೆ ನೀರು ತಂದು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಿಂತನೆ ನಡೆಸಿದ್ದಾರೆ ಎಂದು ಶ್ಲಾಘಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಪ್ರತಿ ಮನೆಗೂ ಪಟ್ಟಣ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಮನೆ ಮಾಲೀಕರಿಗೆ ರಸ್ತೆ ಅಗಲೀಕರಣದ ಬಗ್ಗೆ ಮನವರಿಕೆ ಮಾಡಿಕೊಡ ಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪಟ್ಟಣ ಪಂಚಾಯಿತಿಯಿಂದ ಕ್ರಮ ವಹಿಸಲಾಗುವದು ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣಶೆಟ್ಟಿ ಮಾತನಾಡಿ, ರಸ್ತೆ ಅಗಲೀಕರಣದಲ್ಲಿ ಪ್ರತಿ ಮನೆ ಮಾಲೀಕರಿಗೂ ಸೂಕ್ತ ಪರಿಹಾರ ಸಿಗಲಿದೆ. ಆದ್ದರಿಂದ ಮನೆ ಮಾಲೀಕರು ಗೊಂದಲ ಮಾಡಿಕೊಳ್ಳದೆ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಈ ಹಿಂದೆ ರಸ್ತೆ ಅಗಲೀಕರಣಕ್ಕೆ ವರ್ತಕರ ಸಂಘದಿಂ ಮನವಿ ನೀಡಲಾಗಿತ್ತು. ಯಾರಾದರೂ ತಕರಾರು ತೆಗೆದರೆ ಅವರ ಮನ ಒಲಿಸುತ್ತೇವೆ ಎಂದು ಭರವಸೆ ನೀಡಿದರು. ಹೊನ್ನೇಕೊಡಿಗೆ ಗ್ರಾಪಂ ಸದಸ್ಯ ಮಂಜುನಾಥ್ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಹೊನ್ನೇಕೊಡಿಗೆ- ನರಸಿಂಹರಾಜಪುರದ ಮಧ್ಯೆ ಭದ್ರಾ ಹಿನ್ನೀರಿಗೆ ₹35 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಮಾಡಿಸುತ್ತಿರುವುದರಿಂದ ಹೊನ್ನೇಕೊಡಿಗೆ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಈಗ ನಾವು ಹೊನ್ನೇಕೊಡಿಗೆಯಿಂದ ನರಸಿಂಹರಾಜಪುರಕ್ಕೆ ಬರಬೇಕಾದರೆ 20 ಕಿ.ಮೀ.ಆಗಲಿದೆ. ಸೇತುವೆ ನಿರ್ಮಾಣವಾದರೆ ಕೇವಲ 5 ಕಿ.ಮೀ.ಬಂದರೆ ನರಸಿಂಹರಾಜಪುರ ತಲಪಬಹುದು ಎಂದರು.
ಸಭೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಎಚ್.ಬಿ.ರಘವೀರ್, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ವಸೀಂ ಇದ್ದರು.