ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ಲಾಸ್ಟಿಕ್ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡುಬರುತ್ತಿರುವುದರಿಂದ ಅವುಗಳ ವೈಜ್ಞಾನಿಕ ಸಂಗ್ರಹಣೆಗಾಗಿ ಮಂಡ್ಯ ನಗರಸಭೆ ಪೆಟ್ ಬಾಟಲ್ ಶಡರ್‌ನ್ನು ನಗರಕ್ಕೆ ಪರಿಚಯಿಸಿದೆ.ವೃತ್ತಾಕಾರದಲ್ಲಿರುವ ಕಬ್ಬಿಣದ ಪೆಟ್ ಬಾಟಲ್ ಶಡರ್‌ನ್ನು ನಗರದ ಏಳು- ಎಂಟು ಸ್ಥಳಗಳಲ್ಲಿ ಅಳವಡಿಸಲಾಗಿದೆ. ಶನಿವಾರ ಸಾರಿಗೆ ಬಸ್ ನಿಲ್ದಾಣ, ಕ್ರೀಡಾಂಗಣ ರಸ್ತೆಯಲ್ಲಿ ಅಳವಡಿಸಿದ್ದು, ಇನ್ನೆರಡು ದಿನಗಳಲ್ಲಿ ರೈಲು ನಿಲ್ದಾಣ, ವಿ.ವಿ.ರಸ್ತೆ, ಆಸ್ಪತ್ರೆ ರಸ್ತೆ, ನೂರಡಿ ರಸ್ತೆ, ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗುವುದು ಎಂದು ಪೌರಾಯುಕ್ತೆ ಯು.ಪಿ.ಪಂಪಾಶ್ರೀ ತಿಳಿಸಿದ್ದಾರೆ.
ಕುಡಿಯುವ ನೀರಿನ ಬಾಟಲ್ ಸೇರಿದಂತೆ ಹಲವು ಮಾದರಿಯ ಪ್ಲಾಸ್ಟಿಕ್ ಬಾಟಲ್‌ಗಳು ಚರಂಡಿ, ಕಾಲುವೆ, ನಾಲೆಗಳು, ರಸ್ತೆ ಪಕ್ಕದಲ್ಲಿ ಬೀಳುತ್ತಿರುವುದರಿಂದ ಸ್ವಚ್ಛತೆ ಸಂಪೂರ್ಣವಾಗಿ ಹಾಳಾಗುತ್ತಿದೆ. ಚರಂಡಿ, ಕಾಲುವೆಗಳು ಕಲುಷಿತಗೊಳ್ಳುತ್ತಿವೆ. ನಿಂತ ನೀರು ಮುಂದೆ ಸಾಗದೆ ಅವಾಂತರ ಸೃಷ್ಟಿಯಾಗುತ್ತಿದೆ.ಈ ಅವಾಂತರವನ್ನು ತಪ್ಪಿಸುವ ಸಲುವಾಗಿ ಮತ್ತು ಪ್ಲಾಸ್ಟಿಕ್ ಬಾಟಲ್‌ಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮತ್ತು ವಿಲೇವಾರಿ ಮಾಡುವ ದೃಷ್ಟಿಯಿಂದ ಈ ಪೆಟ್ ಬಾಟಲ್ ಶಡರ್‌ಗಳನ್ನು ನಗರದಲ್ಲಿ ಅಳವಡಿಸಲಾಗುತ್ತಿದೆ. ಶಡರ್‌ನ ಕೆಳಭಾಗದಲ್ಲಿ ಪೂರ್ಣವಾಗಿ ತೆರೆದುಕೊಳ್ಳುವ ವ್ಯವಸ್ಥೆ ಇರುವುದರಿಂದ ಹಾಗೂ ಎತ್ತ ಬೇಕಾದರೂ ತಿರುಗಿಸಿಕೊಳ್ಳಬಹುದಾಗಿರುವುದರಿಂದ ನಿತ್ಯ ಕಸ ಸಂಗ್ರಹಿಸುವವರು ಪ್ಲಾಸ್ಟಿಕ್ ಬಾಟಲ್‌ಗಳನ್ನು ವಿಲೇವಾರಿ ಮಾಡುವುದಕ್ಕೂ ಸಾಧ್ಯವಾಗಲಿದೆ. ಈ ಪೆಟ್ ಬಾಟಲ್ ಶಡರ್‌ವೊಂದಕ್ಕೆ 18 ಸಾವಿರ ರು. ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇರುವ ಹಾಗೂ ಜನಸಂಧಣಿ ಹೆಚ್ಚಿರುವ ಜಾಗಗಳಲ್ಲೆಲ್ಲಾ ಈ ಪೆಟ್ ಬಾಟಲ್ ಶಡರ್‌ನ್ನು ಅಳವಡಿಸಲು ನಗರಸಭೆ ನಿರ್ಧರಿಸಿದೆ.