ಮೂರು ಹೊಸ ಜಿಲ್ಲೆ ರಚನೆ ಸ್ವಾಗತ

| Published : Feb 10 2024, 01:45 AM IST

ಸಾರಾಂಶ

ರಾಜ್ಯದ ಅತಿದೊಡ್ಡ ಜಿಲ್ಲಾ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಪಿ.ಸಿ.ಗದ್ದಿಗೌಡರ, ವಾಸುದೇವರಾವ ಮತ್ತು ಹುಂಡೆಕರ ಸಮಿತಿಗಳು ಗೋಕಾಕ ನೂತನ ಜಿಲ್ಲೆ ಮಾಡುವಂತೆ ವರದಿ ನೀಡಿರುವ ಪರಿಣಾಮ ಅಂದಿನ ಜೆ.ಎಚ್.ಪಟೇಲರ ಸರ್ಕಾರ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು.

ಕನ್ನಡಪ್ರಭ ವಾರ್ತೆ ಗೋಕಾಕ

ಆಡಳಿತಾತ್ಮಕ ದೃಷ್ಟಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 3 ಹೊಸ ಜಿಲ್ಲೆಗಳನ್ನು ರಚಿಸಲು ಮುಂದಾಗಿರುವ ಸರ್ಕಾರ, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ಸಲ್ಲಿಸುವಂತೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ನೂತನ ಗೋಕಾಕ ಜಿಲ್ಲಾ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಅತಿದೊಡ್ಡ ಜಿಲ್ಲಾ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಪಿ.ಸಿ.ಗದ್ದಿಗೌಡರ, ವಾಸುದೇವರಾವ ಮತ್ತು ಹುಂಡೆಕರ ಸಮಿತಿಗಳು ಗೋಕಾಕ ನೂತನ ಜಿಲ್ಲೆ ಮಾಡುವಂತೆ ವರದಿ ನೀಡಿರುವ ಪರಿಣಾಮ ಅಂದಿನ ಜೆ.ಎಚ್.ಪಟೇಲರ ಸರ್ಕಾರ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು. ಆದರೆ, ದಿ.ಪಾಟೀಲ್ ಪುಟ್ಟಪ್ಪ ಮತ್ತು ಕನ್ನಡರಪರ ಹೋರಾಟಗಾರರು ಬೆಳಗಾವಿ ಗಡಿವಿಷಯದ ಕುರಿತು ಸರ್ಕಾರದ ಗಮನ ಸೆಳೆದಾಗ ಪಟೇಲರು ಆ ಆದೇಶ ಹಿಂಪಡೆದರು ಹಾಗಾಗಿ ಗೋಕಾಕ ಜಿಲ್ಲಾ ಕೇಂದ್ರ ವಂಚಿತವಾಗಿದೆ ಎಂದರು.ಸರ್ಕಾರ ಈಗ ಹೊಸ ಜಿಲ್ಲಾ ರಚನೆಗೆ ಮುಂದಾಗಿದ್ದು, ಗೋಕಾಕ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ನೂತನ ಜಿಲ್ಲೆ ಎಂದು ಘೋಷಿಸಬೇಕು. 18 ವಿಧಾನಸಭಾ ಕ್ಷೇತ್ರ ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ಹೊಂದಿ ವಿಸ್ತೀರ್ಣದಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆ ಮಾಡಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳನ್ನು ಮಾಡಬೇಕು ಎಂದು ಕಳೆದ 40 ವರ್ಷಗಳಿಂದ ನಿರಂತರ ಹೋರಾಟಗಳು ನಡೆದಿವೆ ಎಂದು ತಿಳಿಸಿದರು. ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ನಾಲ್ಕು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಎಲ್ಲವೂ ಬದಲಾಗಿದೆ. ಬೆಳಗಾವಿ ನಗರ ಸೇರಿದಂತೆ ಗಡಿಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿದ್ದು, ಜಿಲ್ಲೆ ವಿಭಜನೆಗೆ ಗಡಿವಿಷಯ ಅಡ್ಡಿ ಬರುವುದಿಲ್ಲ ಎಂದಿರುವ ಅವರು, ಆದಷ್ಟುಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಜಿಲ್ಲೆಗಳನ್ನು ಮಾಡಲು ಸರ್ಕಾರ ಏಕಾಗ್ರತೆ ಪ್ರರ್ದಶಿಸಬೇಕು ಎಂದು ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಕೋರಿದ್ದಾರೆ.