ಸಾರಾಂಶ
ಗದಗ: ರಾಜ್ಯದಲ್ಲಿ ಸೆ. 22ರಿಂದ ಆರಂಭವಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರು ಏನು ನಮೂದಿಸಬೇಕು ಎಂದು ಸೆ. 17ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವಿಷಯವಾಗಿ ಈಗಾಗಲೇವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಮಹಾಸಭಾಗಳ ನಿರ್ಣಯಕ್ಕೂ ಪಂಚಮಸಾಲಿ ಸಮುದಾಯಕ್ಕೂ ಯಾವುದೇ ಸಂಬಂಧ ಇಲ್ಲ. ಪಂಚಮಸಾಲಿಗಳು ಜಾತಿ ಕಾಲಂನಲ್ಲಿ ಏನನ್ನು ನಮೂದಿಸಬೇಕು ಎಂಬುದನ್ನು ಸಮಾಜದ ಹಿರಿಯರು, ಮುಖಂಡರು ನಿರ್ಧರಿಸುತ್ತಾರೆ ಎಂದರು.
ಸೆ. 22ರಿಂದ ಅ.7ರ ವರೆಗೆ ಸರ್ಕಾರ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಪಂಚಮಸಾಲಿಗಳು ಏನು ನಮೂದು ಮಾಡಬೇಕು ಎಂಬ ಬಗ್ಗೆ ಸಮಾಜದ ಮುಖಂಡರು, ಸಾರ್ವಜನಿಕರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಆದರೆ ಇದೆಲ್ಲರ ಮಧ್ಯೆ ವೀರಶೈವ ಮಹಾಸಭಾ ಮತ್ತು ಲಿಂಗಾಯತ ಮಹಾಸಭಾ ಸಂಸ್ಥೆಗಳು ಹೇಳುವ ಜಾತಿಯನ್ನು ಪಂಚಮಸಾಲಿಗಳು ನಮೂದಿಸಬಾರದು ಎಂದರು.ಇತ್ತೀಚೆಗೆ 1572 ಜಾತಿಯನ್ನು ಹಿಂದುಳಿದ ವರ್ಗ ಇಲಾಖೆ ಪ್ರಕಟಿಸಿದೆ. ಈ ಮೊದಲ ಪಂಚಮಸಾಲಿ ಲಿಂಗಾಯತ, ವೀರಶೈವ ಪಂಚಮಸಾಲಿ ಎಂದು ಜಾತಿ ಕಾಲಂ ಇದ್ದವು. ಈಗ ಹೊಸದಾಗಿ ಜೈನ್ ಪಂಚಮಸಾಲಿ ಎಂಬ ಜಾತಿ ಸೇರ್ಪಡೆ ಮಾಡಲಾಗಿದೆ. ಪಂಚಮಸಾಲಿಗಳಲ್ಲಿ ಸರ್ಕಾರ ಗೊಂದಲ ಸೃಷ್ಟಿ ಮಾಡುತ್ತಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪಂಚಮಸಾಲಿಗಳ ಹಿತದೃಷ್ಟಿಯಿಂದ ಸೆ.17ರಂದು ಈ ಸಭೆ ನಡೆಸಲಿದ್ದೇವೆ. ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯದ ಅಧಿಕವಾಗಿದೆ. ಪಂಚಮಸಾಲಿ ಸಭೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ರಾಜ್ಯ ಸರ್ಕಾರ ಹೊಸದಾಗಿ ನಾಸ್ತಿಕ ಮತ್ತು ತಿಳಿಸಲು ನಿರಾಕರಿಸುತ್ತಾರೆ ಎಂಬ ಧರ್ಮ ಕಾಲಂ ಸೇರ್ಪಡೆಗೊಳಿಸಿದ್ದು ಅತ್ಯಂತ ವಿಷಾದಕರ ಸಂಗತಿಯಾಗಿದ್ದು ಕೂಡಲೇ ಇವುಗಳನ್ನು ತೆಗೆದುಹಾಕಬೇಕು ಎಂದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರು, ಯುವ ನಾಯಕರು ಹಾಜರಿದ್ದರು.ಬಸವ ಸಂಸ್ಕೃತಿ ಅಭಿಯಾನದ ಹೆಸರಿನಲ್ಲಿ ಬಸವ ತತ್ವಗಳನ್ನು ಸಮಾಜದಲ್ಲಿ ಪರಿಸಬೇಕು ಇದನ್ನು ಸ್ವಾಗತಿಸುತ್ತೇವೆ. ಆದರೆ, ಕೆಲ ಸ್ವಾಮೀಜಿಗಳು ಇದೇ ಸಂದರ್ಭದಲ್ಲಿ ನಾಸ್ತಿಕರಂತೆ ವರ್ತಿಸುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಕ್ಷ್ಮಿ, ಗಣೇಶನನ್ನು ತೆಗಳುವ ಕೆಲಸ ನಡೆಯುತ್ತಿದೆ. ಇದಕ್ಕೆ ಹಿರಿಯರು ಅವಕಾಶ ನೀಡಬಾರದು ಎಂದು ವಚನಾನಂದ ಸ್ವಾಮೀಜಿ ಹೇಳಿದರು.