ಕುಮಟಾ ಪಟ್ಟಣದ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ ನಡೆಯಿತು. ಬಿಇಒ ಹಾಗೂ ತಾಪಂ ಇಒ ರಾಜೇಂದ್ರ ಎಲ್. ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಕುಮಟಾ: ಶಿಕ್ಷಣದ ಉದಾತ್ತ ಕನಸು ಕೇವಲ ಅಂಕ ಗಳಿಕೆಯಲ್ಲಿಲ್ಲ. ಅದು ವಿದ್ಯಾರ್ಥಿಗಳ ಕಂಗಳಲ್ಲಿದೆ, ಶಿಕ್ಷಕರ ಕೈಗಳಲ್ಲಿದೆ, ಗುಣಾತ್ಮಕ ಶಿಕ್ಷಣ ವಾಸ್ತವಕ್ಕಿಳಿದಾಗ ಶಿಕ್ಷಣ ಗುರಿ ತಲುಪುತ್ತದೆ. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ವ್ಯಾಪಕವಾಗಿ ಆಗಬೇಕು ಎಂದು ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಎಲ್. ಭಟ್ ಅವರು ಹೇಳಿದರು.
ಪಟ್ಟಣದ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.ಬಿಆರ್‌ಸಿ ರೇಖಾ ನಾಯ್ಕ ಮಾತನಾಡಿ, ಭವಿಷ್ಯದ ಯುವ ಪೀಳಿಗೆಯನ್ನು ನಿರ್ಮಿಸುವ ಸಾಮರ್ಥ್ಯವು ಶಿಕ್ಷಕರಿಗೆ ಮಾತ್ರ ಇದೆ ಎಂದರು.
ಡಯಟ್ ಉಪನ್ಯಾಸಕಿ ತ್ರಿವೇಣಿ ನಾಯಕ ಮಾತನಾಡಿ, ಪಠ್ಯ ಶಿಕ್ಷಣ ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ಯೋಚಿಸುವ, ಚಿಂತಿಸುವ, ಕನಸು ಬಿತ್ತುವ ಕಾರ್ಯ ಶಿಕ್ಷಕರಿಂದಾಗಬೇಕು ಎಂದರು.ಡಯಟ್ ಉಪನ್ಯಾಸಕಿ ಭಾರತಿ ನಾಯ್ಕ ಮಾತನಾಡಿ, ಶಿಕ್ಷಣ ಮೌಲ್ಯಾಧಾರಿತ ಮಾತ್ರವಲ್ಲದೇ ಪ್ರಗತಿದಾಯಕವೂ ಆಗಿರಬೇಕು ಎಂದರು.
ಅಘನಾಶಿನಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಮತಾ ನಾಯ್ಕ ಮಾತನಾಡಿದರು. ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕ ಲಿಂಗಪ್ಪ ಶೆಡಗೇರಿ ಅವರನ್ನು ಸನ್ಮಾನಿಸಲಾಯಿತು.ಬಿಆರ್‌ಪಿ ಸಂಧ್ಯಾ ರಾಯ್ಕರ್, ಊರಕೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಜಿ. ಭಟ್, ತಾಲೂಕು ಪ್ರೌಢಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ರೊಡ್ರಗೀಸ್, ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ವಿಜಯಕುಮಾರ ನಾಯ್ಕ, ಪ್ರದೀಪ ನಾಯಕ, ಎಸ್.ಎಸ್. ಪೈ ಇದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಾಂಡುರಂಗ ವಾಗ್ರೇಕರ್ ಸ್ವಾಗತಿಸಿದರು. ಕತಗಾಲ ಹೈಸ್ಕೂಲ್ ಶಿಕ್ಷಕ ಎಚ್.ಟಿ. ತಳ್ಳಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎನ್. ರಾಮು ಹಿರೇಗುತ್ತಿ ವಂದಿಸಿದರು.