ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಹಲವು ಚಟುವಟಿಕೆಗಳು ಆಯೋಜನೆಗೊಂಡಿದ್ದವು.ಸನಾತನ ಸಂಸ್ಕೃತಿಯ ಪಾರಂಪರಿಕ ವ್ಯಕ್ತಿತ್ವ ಎನಿಸಿರುವ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಅನೇಕ ಮಾದರಿಗಳು ಇಲ್ಲಿನ ಮನೆಗಳಲ್ಲಿ ಕಂಡುಬಂದವು. ಮನೆಮನೆಗಳಲ್ಲಿ ಬಾಲಕೃಷ್ಣನ ಆರಾಧನೆ ನಡೆಯಿತು. ಮುರಾರಿಯ ನಾಮಸ್ಮರಣೆ, ವಿವಿಧ ವಿನೋದಾವಳಿಗಳ ಪ್ರಾತಕ್ಷಿಕೆಯೊಂದಿಗೆ ಮಕ್ಕಳಿಗೆ ಶ್ರೀಕೃಷ್ಣ-ರಾಧೆಯರ ವೇಷಭೂಷಣಗಳನ್ನು ಹಾಕಿ ಸಡಗರದಿಂದ ಜನ್ಮಾಷ್ಟಮಿಯನ್ನು ಆಚರಿಸಿದರು. ತಾಲೂಕಿನ ಅನೇಕ ಹೋಬಳಿ ಕೇಂದ್ರಗಳು ಮತ್ತು ಗ್ರಾಮಗಳಲ್ಲಿ ಕೂಡ ಕೃಷ್ಣಾಷ್ಟಮಿಯ ವೈಭವ ಗಮನ ಸೆಳೆಯಿತು.ಶ್ರೀಕೃಷ್ಣ ದೇಗುಲದಲ್ಲಿ ಸಂಭ್ರಮ ತಾಲೂಕು ಯಾದವ(ಗೊಲ್ಲ) ಸಂಘದ ನೇತೃತ್ವದಲ್ಲಿ ಇಲ್ಲಿನ ನಾಗರಕೆರೆಯ ಸಮೀಪ ಇರುವ ಶ್ರೀಕೃಷ್ಣ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ದೇವಾಲಯದ ಶ್ರೀಕೃಷ್ಣ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಇಲ್ಲಿನ ಬಸ್ ನಿ ಲ್ದಾಣದ ಸಮೀಪ ಇರುವ ಇತಿಹಾಸ ಪ್ರಸಿದ್ದ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ದೇವಾಲಯದ ವೇಣುಗೋಪಾಲ ಸ್ವಾಮಿ, ವೆಂಕಟೇಶ್ವರ ಸ್ವಾಮಿ ಹಾಗೂ ಪದ್ಮಾವತಿ ದೇವಿಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಜನೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.ಸಂಜೆ ಕೃಷ್ಣನ ಬಾಲಲೀಲಾ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಕೃಷ್ಣ, ರಾಧೆಯರ ವೇಷಧಾರಿಗಳಾಗಿ ಪಾಲ್ಗೊಂಡರು. ನಾಟ್ಯಮಯೂರಿ ಕಲಾ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ತೂಬಗೆರೆ ವೇಣುಗೋಪಾಲ ದೇಗುಲ:ತಾಲೂಕಿನ ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪವಿರುವ ಶ್ರೀರಂಗವನದ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.ಜನ್ಮಾಷ್ಟಮಿ ಪ್ರಯುಕ್ತ, ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲ ಸ್ವಾಮಿಗೆ ಕ್ಷೀರಾಭಿಷೇಕ, ಅಷ್ಟಗಂಧ ಅರ್ಚನೆ, ವಿಷ್ಣು ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.ಹಲವು ದೇಗುಲಗಳಲ್ಲಿ ಸಂಭ್ರಮ:ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನಪೇಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ವಿಠೋಬ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯ, ಪಾಂಡುರಂಗಸ್ವಾಮಿ ದೇವಾಲಯ, ಶ್ರೀರಾಮ ದೇಗುಲ ಸೇರಿದಂತೆ ಹಲವೆಡೆ ಸಂಭ್ರಮ ಕಂಡು ಬಂತು.