ಸಾರಾಂಶ
3 ಆನೆಗಳ ಹಿಂಡೊಂದು ನೆರಿಯ, ಚಿಬಿದ್ರೆ, ತೋಟತ್ತಾಡಿ, ಚಾರ್ಮಾಡಿ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಳಿಕ ಸಂಚರಿಸಿದೆ. ನೆರಿಯದ ಪರ್ಪಳ ಪ್ರದೇಶದಿಂದ ಬಂದಿದ್ದ ಕಾಡಾನೆ ಹಿಂಡು ಅಣಿಯೂರು ಶಾಲೆ, ಬಯಲು,ಬಸ್ತಿ ಇತರ ಕಡೆ ಸಂಚರಿಸಿದೆ. ಈ ವೇಳೆ ಸ್ಥಳೀಯರು ಆನೆಗಳನ್ನು ಓಡಿಸಿದ್ದು ಇದರಿಂದ ಆನೆಗಳ ಹಿಂಡು ಚದುರಿದ್ದು ಇದರಲ್ಲಿ ಒಂದು ಆನೆ ತೋಟತ್ತಾಡಿ, ಬೆಂದ್ರಾಳ ಕಡೆ ಸಂಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳ್ತಂಗಡಿ: ಸೋಮವಾರ ರಾತ್ರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಭಾನುವಾರ ತಡರಾತ್ರಿ ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಪರಿಸರದಲ್ಲಿ ಒಂಟಿ ಸಲಗ ಕೃಷ್ಣ ಭಟ್ ಎಂಬವರ ಕೃಷಿ ತೋಟದಲ್ಲಿ ಹಾನಿ ಉಂಟುಮಾಡಿತ್ತು. ಬಳಿಕ ಸೋಮವಾರ ಇದೇ ಗ್ರಾಮದ ಕಿನ್ಯಡ್ಕ ಹಾಗೂ ಇನ್ನಿತರ ಪರಿಸರಗಳಲ್ಲಿ ಓಡಾಟ ನಡೆಸಿದೆ. ಇದಲ್ಲದೆ 3 ಆನೆಗಳ ಹಿಂಡೊಂದು ನೆರಿಯ, ಚಿಬಿದ್ರೆ, ತೋಟತ್ತಾಡಿ, ಚಾರ್ಮಾಡಿ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಳಿಕ ಸಂಚರಿಸಿದೆ. ನೆರಿಯದ ಪರ್ಪಳ ಪ್ರದೇಶದಿಂದ ಬಂದಿದ್ದ ಕಾಡಾನೆ ಹಿಂಡು ಅಣಿಯೂರು ಶಾಲೆ, ಬಯಲು,ಬಸ್ತಿ ಇತರ ಕಡೆ ಸಂಚರಿಸಿದೆ. ಈ ವೇಳೆ ಸ್ಥಳೀಯರು ಆನೆಗಳನ್ನು ಓಡಿಸಿದ್ದು ಇದರಿಂದ ಆನೆಗಳ ಹಿಂಡು ಚದುರಿದ್ದು ಇದರಲ್ಲಿ ಒಂದು ಆನೆ ತೋಟತ್ತಾಡಿ, ಬೆಂದ್ರಾಳ ಕಡೆ ಸಂಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈಗ ಒಂಟಿ ಸಲಗ ಸಹಿತ ಆನೆಗಳ ಹಿಂಡು ಕೂಡ ಕಂಡು ಬಂದಿರುವುದು ಸ್ಥಳೀಯರನ್ನು ಆತಂಕಕ್ಕೆ ತಳ್ಳಿದೆ. ಸೋಲಾರ್ ಬೇಲಿ, ಆನೆ ಕಂದಕ ಇತ್ಯಾದಿ ಇದ್ದರೂ ಇವುಗಳ ನಿರ್ವಹಣೆ ಇಲ್ಲದ ಕಾರಣ ಆನೆಗಳು ಒಂದೆಡೆಯಿಂದ ಇನ್ನೊಂದಡೆಗೆ ಸುಲಭದಲ್ಲಿ ಸಂಚರಿಸುವಂತಾಗಿದೆ. ಜನರಲ್ಲಿ ಭೀತಿಯ ವಾತಾವರಣದ ಜತೆ ಸಾಕಷ್ಟು ಕೃಷಿ ಹಾನಿ ಉಂಟಾಗುತ್ತಿದೆ ಎಂದು ಸ್ಥಳೀಯ ಕೃಷಿಕರು ಹೇಳಿದ್ದಾರೆ.ಕಳೆದ ಕೆಲವು ತಿಂಗಳ ಹಿಂದೆ 6 ಆನೆಗಳು ಚಾರ್ಮಾಡಿ ತೋಟವೊಂದರಲ್ಲಿ ಸಂಚರಿಸುವುದು ಕಂಡುಬಂದಿತ್ತು. ಅಲ್ಲದೆ ಕಳೆದ ವರ್ಷ ಇದೇ ಸಮಯದಲ್ಲಿ ಕಾಡಾನೆಯೊಂದು ನೆರಿಯ ರಸ್ತೆಯಲ್ಲಿ ಕಾರಿನ ಮೇಲೆ ದಾಳಿ ನಡೆಸಿ ಕಾರಿನ ಚಾಲಕನನ್ನು ಗಾಯಗೊಳಿಸಿತ್ತು.