ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಕೃತಕ ಬುದ್ಧಿಮತ್ತೆ(ಎಐ) ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಉದ್ಯೋಗ ನಷ್ಟವಾಗುವ ಭೀತಿ ಇದೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಗುರುಭವನದಲ್ಲಿ ಸಂಗಮ ಪ್ರತಿಷ್ಠಾನ ಹಾಲಹಳ್ಳಿ, ಸಂಕಲ್ಪ ಶಿಕ್ಷಕರ ವೇದಿಕೆ, ಮಹಾ ಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಸಂವಿಧಾನದ ಚಿಂತನೆಗೆ ಸಂಬಂಧ ಒಂದು ದಿನದ ಉಚಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಉದ್ಯೋಗಗಳು ಮಾತ್ರ ಕಡಿಮೆಯಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ತಂತ್ರಜ್ಞಾನ. ಪ್ರಸ್ತುತ ಎಲ್ಲವೂ ಕಂಪ್ಯೂಟರ್ ಆಧಾರಿತವಾಗಿದೆ. ಇದೀಗ ಎಐ ಬಂದಿರುವ ಕಾರಣ ಸಾಕಷ್ಟು ಜನರ ಉದ್ಯೋಗಕ್ಕೆ ಕುತ್ತು ಬಂದಿದೆ ಎಂದು ಹೇಳಿದರು.ಇಂಥ ಸವಾಲನ್ನು ಎದುರಿಸಲು ಯುವಕರು ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕಾದ ಅಗತ್ಯವಿದೆ. ನಾವು ಎಷ್ಟೇ ಓದಿದರೂ ಅದನ್ನು ಆಚರಣೆಗೆ ತರುವುದು ಮುಖ್ಯ. ಇಂದಿನ ಪರಿಸ್ಥಿತಿ ಎದುರಿಸಲು ನಾವೇ ನಮ್ಮನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಪಡಗೂರು ಅಡವಿ ಶ್ರೀಗಳು ಈ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ. ತಮ್ಮಲ್ಲಿರುವ ಸಂಪನ್ಮೂಲವನ್ನು ಸಮಾಜಕ್ಕೆ ನೀಡುವುದು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಶೀಘ್ರವಾಗಿ ಮಾಡಬೇಕು. ಇದರಿಂದ ಯುವಕರಿಗೆ ಉದ್ಯೋಗಾವಕಾಶ ಸಿಗುವುದರ ಜೊತೆಗೆ ಆಡಳಿತವೂ ಸುಸೂತ್ರವಾಗುತ್ತದೆ. ಜೊತೆಗೆ ಕೆಲಸ ಸಿಕ್ಕವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪಡಗೂರು ಅಡವಿ ಮಠಾಧೀಶರಾದ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿದರು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಶರಣು ಬಾಗೂರು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂವಿಧಾನ ಚಿಂತನೆ ಬಗ್ಗೆ ಸುಧೀರ್ಘವಾಗಿ ಮಾತನಾಡಿ ವಿಷಯ ಹಂಚಿಕೊಂಡರು.ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಎನ್.ಜಯಕುಮಾರ್, ಸಂಕಲ್ಪ ವೇದಿಕೆ ಹಾಗೂ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಶಿಕ್ಷಕರು ಹಾಗೂ ಯುವಕರು ಇದ್ದರು.