ಹಾವೇರಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು, ಗಾಳಿ ಸಹಿತ ಕೆಲಕಾಲ ಮಳೆಯಾಗಿದ್ದು, ರಾಣಿಬೆನ್ನೂರ ನಗರದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.ಬೆಳಗ್ಗೆಯಿಂದ ಸಂಜೆವರೆಗೆ ವಿಪರೀತ ಸೆಕೆ ದಾಖಲಾಗಿದ್ದು, ಸಂಜೆ ಅಲ್ಲಲ್ಲಿ ಏಕಾಏಕಿ ಜೋರಾದ ಗಾಳಿ ಸಹಿತ ಮಳೆ ಸುರಿದಿದೆ. ರಾಣಿಬೆನ್ನೂರಿನ ಗೌರಿಶಂಕರ ನಗರ, ವಾಗೀಶ ನಗರ ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ನಗರದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಯಿತು.
ಹಾವೇರಿ, ಬ್ಯಾಡಗಿ, ಶಿಗ್ಗಾಂವಿ, ಸವಣೂರು, ಹಾನಗಲ್ಲ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ವಿವಿಧ ಭಾಗದಲ್ಲಿ ಮಳೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೆಕ್ಕೆಜೋಳ, ರಾಗಿ, ಕುಸುಬೆ ಸೇರಿದಂತೆ ಕೆಲ ಬೆಳೆಗಳನ್ನು ಒಣಗಿಸಲು ಹಾಗೂ ಕಟಾವು ಮಾಡಿ ಮಾರಾಟಕ್ಕೆ ಮುಂದಾಗಬೇಕಿದ್ದ ರೈತರು ಈ ಅಕಾಲಿಕ ಮಳೆಯಿಂದ ಸಮಸ್ಯೆ ಎದುರಿಸುವಂತಾಗಿದೆ.ರಾಣಿಬೆನ್ನೂರು: ನಗರದಲ್ಲಿ ಸೋಮವಾರ ಸಂಜೆ ಏಕಾಎಕಿ ಸುರಿದ ಮಳೆಯು ಬಿಸಿಲಿನ ಪ್ರಖರತೆಯಿಂದ ಬೇಸತ್ತ ಜನಕ್ಕೆ ತಂಪಿನ ಅನುಭವ ಮೂಡಿಸಿತು. ಎಂ.ಜಿ. ರಸ್ತೆಯಲ್ಲಿ ಮಳೆಯ ನೀರಿನಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.