ಗುತ್ತಲ: ಆಧುನಿಕ ಕಾಲದಲ್ಲಿ ಶಾಂತಿ ತೃಪ್ತಿ ಕಾಣುತ್ತಿಲ್ಲ. ಬದುಕಿನಲ್ಲಿ ಹೋರಾಟ ಸಂಘರ್ಷ ನಿತ್ಯ ತಪ್ಪಿದ್ದಲ್ಲ. ಒಂದೆಡೆ ವೈಚಾರಿಕ ಪ್ರಜ್ಞೆ ಬೆಳೆಯುತ್ತಿದೆ. ಇನ್ನೊಂದೆಡೆಗೆ ಸಂಸ್ಕೃತಿ ಸಭ್ಯತೆ ಮಾಯವಾಗುತ್ತಿವೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆಗೆ ದೈವಶಕ್ತಿ ಸದಾ ಇರುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಿನ ನೆಗಳೂರು ಸಂಸ್ಥಾನ ಹಿರೇಮಠದ ಆವರಣದಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ವೀರಶೈವ ಪಂಚಸೂತ್ರಗಳ ಪ್ರವಚನ ಗ್ರಂಥ ಬಿಡುಗಡೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಕಲರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಆದರ್ಶ ಮೌಲ್ಯಗಳನ್ನು ಕಾಣಬಹುದು. ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದುದು. ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಶಿವಾದ್ವೈತ ತತ್ವ ಸಿದ್ಧಾಂತದ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತೋರಿವೆ. ಪಂಚಾಚಾರ್ಯ ಯುಗಮಾನೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿರುವುದು ಭಕ್ತರ ಸೌಭಾಗ್ಯವೇ ಆಗಿದೆ. ಈ ಅಭೂತಪೂರ್ವ ಕಾರ್ಯಕ್ರಮ ಸಂಯೋಜಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ರೇಶ್ಮೆ ಮಡಿ ಹೊದಿಸಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಸತ್ಯ ಮನುಷ್ಯನನ್ನು ಬದಲಾಯಿಸುತ್ತದೆ. ಕೆಲಸ ಮಾಡಲು ಮನಸ್ಸಿದ್ದರೆ ನೂರಾರು ಮಾರ್ಗಗಳು ಕಾಣುತ್ತವೆ. ಜೀವನ ನಮಗೆ ಏನೆಲ್ಲಾ ಕೊಟ್ಟಿದೆ ಎಂದು ಸರಿಯಾಗಿ ತಿಳಿದರೆ ನಾವೆಷ್ಟು ಅದೃಷ್ಟವಂತರೆಂದು ಗೊತ್ತಾಗುತ್ತದೆ. ಬಾಳಿನ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ. ಮನುಷ್ಯನ ಹಲವಾರು ದು:ಖ ದುಮ್ಮಾನಗಳಿಗೆ ಮನಸ್ಸೇ ಕಾರಣ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು, ಸುಖ ಬಯಸುವುದು ಮನುಷ್ಯನ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ ಎಂದರು.

ಸಾನ್ನಿಧ್ಯ ವಹಿಸಿದ ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು, ವೀರಶೈವ ಇದು ಜಾತಿಯಲ್ಲ. ವರ್ಗ ಪಂಗಡವನ್ನು ಸೂಚಿಸುವುದಲ್ಲ. ಶಿವ ಜೀವರ ಆಧ್ಯಾತ್ಮ ಅನುಸಂಧಾನದ ಕೃತಿಯಾಗಿದೆ ಎಂದರು.

ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅಧರ್ಮಕ್ಕೆ ಹಲವು ದಾರಿ. ಆದರೆ ಧರ್ಮಕ್ಕೊಂದೆ ದಾರಿ. ಕೆಡುವುದಕ್ಕಿಂತ ಕಟ್ಟುವುದಕ್ಕೆ ಮುರಿಯುವುದಕ್ಕಿಂತ ಜೋಡಿಸುವುದಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿದೆ. ಶ್ರೀ ಜಗದ್ಗುರು ಪಂಚ ಪೀಠಾಧೀಶರ ಮಾನವ ಧರ್ಮಕ್ಕೆ ಜಯವಾಗಲೆಂಬ ಉದಾತ್ತ ನಿಲುವು ಎಲ್ಲರ ಜೀವ ನಾಡಿಯಾಗಿದೆ. ಇಂಥ ಅಭೂತಪೂರ್ವ ಸಮಾರಂಭದ ಉದ್ಘಾಟನೆ ಭಾಗ್ಯ ನನಗೆ ದೊರೆತಿರುವುದು ಗುರು ಹಿರಿಯರ ಆಶೀರ್ವಾದದ ಫಲವೆಂದರು.ನವ್ಯ ಸಾಹಿತ್ಯ ಸಂಶೋಧಕರು ಮತ್ತು ಆಧ್ಯಾತ್ಮ ಚಿಂತಕರಾದ ಅಮೆರಿಕಾ ಶಿಕ್ಯಾಗೋ ವಾಸಿ ರವಿ ಹಂಜ್ ಅವರು “ವೀರಶೈವ ಪಂಚ ಸೂತ್ರೀಯ ಪ್ರವಚನ” ಗ್ರಂಥ ಬಿಡುಗಡೆ ಮಾಡಿ ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ತನ್ನಲ್ಲಿಯೇ ಇರುವ ಚಿತ್ತ ಶಕ್ತಿಯನ್ನು ಭಗವಂತ ಜಾಗೃತಗೊಳಿಸಿ ಜಗದ ಸೃಷ್ಟಿಯನ್ನು ಮಾಡಿದ. ಸತ್ಯ ಮತ್ತು ಧರ್ಮವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕಾಗಿದೆ ಎಂದರು.


ಬೆಂಗಳೂರಿನ ಡಾ.ಸಿ. ಶಿವಕುಮಾರಸ್ವಾಮಿ ಅವರು ವೀರಶೈವ ಪಂಚ ಸೂತ್ರಗಳ ಪರಿಚಯವನ್ನು ಮಾಡಿಕೊಟ್ಟರು. ನೇತೃತ್ವ ವಹಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಭೆಯ ಸಮ್ಮೇಳನಾಧ್ಯಕ್ಷರಾದ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾಡಿದ ಧರ್ಮ ಕಾರ್ಯಕ್ಕೆ ಶಿವಾಚಾರ್ಯ ಸಂಸ್ಥೆಯಿಂದ ''''''''ಶಿವಾದ್ವೈತ ಸಿದ್ಧಾಂತ ಪ್ರಬೋಧಕ'''''''' ಪ್ರಶಸ್ತಿಯನ್ನಿತ್ತು ಜಗದ್ಗುರುಗಳು ಶುಭ ಹಾರೈಸಿದರು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಬಂದ ಎಲ್ಲಾ ಭಕ್ತರಿಗೆ ಅನ್ನ ದಾಸೋಹ ನಿರಂತರ ಜರುಗಿತು.

ಪ್ರಶಸ್ತಿ ಪ್ರದಾನ: ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ಇದೇ ಸಂದರ್ಭದಲ್ಲಿ ಶ್ರೀಮದ್ ಜಗದ್ಗುರು ಪಂಚಪೀಠಾಧೀಶ್ವರರ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ''''''''ಶಿವಾದ್ವೈತ ತತ್ವ ಪ್ರಬೋಧಕ'''''''' ಪ್ರಶಸ್ತಿ ಪ್ರದಾನ ಮಾಡಲಾಯಿತು.