ಶಿವಾನಂದ ಗೊಂಬಿ
ಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ವಿತರಿಸಲು ಮೊಟ್ಟೆ ಬೇಯಿಸಲು ಆಗುತ್ತಿದ್ದ ಪರದಾಟ ತಪ್ಪಿಸಲು ಗ್ಯಾಸ್ ಸಿಲಿಂಡರ್, ಸ್ಟವ್, ಪಾತ್ರೆ ಖರೀದಿಗೆ ಸರ್ಕಾರ ಅಸ್ತು ಎಂದಿದೆ!ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದು, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಪೈಲೆಟ್ ಪ್ರೊಜೆಕ್ಟಾಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರ, ಇಲ್ಲಿನ ಯಶಸ್ಸನ್ನು ನೋಡಿ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಇದರಿಂದ ಶಿಕ್ಷಕ ಸಮುದಾಯ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ.
ಆದರೆ, ಗ್ಯಾಸ್ ರೀಫಿಲ್ಲಿಂಗ್ ಜವಾಬ್ದಾರಿ ಹೊರೆಸಿರುವುದು ಶಿಕ್ಷಕರಲ್ಲಿ ಚಿಂತೆಯನ್ನು ಹುಟ್ಟುಹಾಕಿದೆ. ಇಸ್ಕಾನ್, ಅದಮ್ಯ ಚೇತನ ಮೂಲಕ ಬಿಸಿಯೂಟ ಸರಬರಾಜು ಆಗುತ್ತಿದ್ದ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆ ಪಡೆಯುತ್ತಿದ್ದ ಶಿಕ್ಷಕರಲ್ಲೂ ಈ ಹೊಸ ಹೊಣೆಗಾರಿಕೆ ದಿಗಿಲು ಹುಟ್ಟಿಸಿದೆ.ಏನಿದು ಯೋಜನೆ?ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಕೊಡುವ ಯೋಜನೆಯನ್ನು ಸರ್ಕಾರ 2022ರಲ್ಲಿ ಜಾರಿಗೊಳಿಸಿತು. ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತಿತ್ತು. ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು. ಯಾವ ಶಾಲೆಗಳಲ್ಲಿ ಬಿಸಿಯೂಟ ತಯಾರಾಗುತ್ತದೆಯೋ ಅಲ್ಲಿ ಬೇಯಿಸಿದ ಮೊಟ್ಟೆ ಕೊಡುವುದು ಸಮಸ್ಯೆಯಾಗಿರಲಿಲ್ಲ. ಆದರೆ, ಇಸ್ಕಾನ್, ಅದಮ್ಯ ಚೇತನಗಳಂತಹ ಸಂಸ್ಥೆಗಳು ಬಿಸಿ ಊಟ ಕೊಡುವ ಶಾಲೆಗಳಲ್ಲಿ ಮೊಟ್ಟೆ ಬೇಯಿಸಿ ಕೊಡುವುದು ದೊಡ್ಡ ಸಮಸ್ಯೆಯಾಗಿತ್ತು. ಮೊಟ್ಟೆ ಬೇಯಿಸುವುದು ಎಲ್ಲಿ? ಎಂಬ ಚಿಂತೆ ಪ್ರತಿನಿತ್ಯ ಕಾಡುತ್ತಿತ್ತು. ಮಕ್ಕಳಿಗೆ ಊಟ ಬಡಿಸಲು ಇರುವ ಅಡುಗೆ ಸಹಾಯಕರು ಅಲ್ಲೋ ಇಲ್ಲೋ ಮೊಟ್ಟೆ ಬೇಯಿಸಿ ಕೊಡುತ್ತಿದ್ದರು. ಇನ್ನು ಕೆಲ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆ ನೀಡಲು ಗುತ್ತಿಗೆ ಕೂಡ ಕೊಟ್ಟಿದ್ದುಂಟು. ಹೀಗಾಗಿ, ಶಾಲೆಗಳಿಗೆ ಮೊಟ್ಟೆ ಬೇಯಿಸುವ ಪರಿಕರ ಕೊಡಬೇಕೆಂಬ ಬೇಡಿಕೆ ಇತ್ತು.
ಅದಕ್ಕೆ ಸ್ಪಂದಿಸಿದ್ದ ರಾಜ್ಯ ಸರ್ಕಾರ 2025-26ರ ಬಜೆಟ್‌ನಲ್ಲಿ ಇದಕ್ಕಾಗಿ ಹಣ ನೀಡುವುದಾಗಿ ಘೋಷಿಸಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಗ್ಯಾಸ್ ಸಿಲಿಂಡರ್, ಒಲೆ, ಪಾತ್ರೆ ಖರೀದಿಗೆ ಹಣ ನೀಡಿದೆ. 2 ಜಿಲ್ಲೆಗಳಲ್ಲಿ ಯಶಸ್ವಿಯಾದ ಬಳಿಕ ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಹೇಳಿದೆ.
ಧಾರವಾಡ ಜಿಲ್ಲೆಯಲ್ಲಿ 1128 ಶಾಲೆಗಳಿವೆ. ಇವುಗಳಲ್ಲಿ 140 ಶಾಲೆಗಳಲ್ಲಿ ಸಿಎಸ್‌ಆರ್ ಫಂಡ್, ದಾನಿಗಳಿಂದ ಗ್ಯಾಸ್ ಸೇರಿದಂತೆ ಮತ್ತಿತರರ ಪರಿಕರಗಳಿವೆ. ಇನ್ನುಳಿದ 988 ಶಾಲೆಗಳಿಗೆ ₹2.51 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ 21-50 ಮಕ್ಕಳಿದ್ದರೆ ಒಂದು ರೀತಿ, 50ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮತ್ತೊಂದು ರೀತಿಯ ಅನುದಾನ ಮಂಜೂರು ನೀಡಿ ಬಿಡುಗಡೆ ಮಾಡಿದೆ. ಇಂತಿಷ್ಟೇ ಗೇಜ್, ಕೇಜಿ ಇರಬೇಕೆಂಬ ನಿಯಮ ಹಾಕಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದ ಬಳಿಕ ಶಾಲೆಗಳು ಖರೀದಿಸಲಿವೆ. ರೀಫಿಲ್ಲಿಂಗ್ ಶಿಕ್ಷಕರ ಹೆಗಲಿಗೆ
ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತದೆ. ಇದರಲ್ಲಿ ಮೊಟ್ಟೆಗೆ ₹5, ಇಂಧನಕ್ಕೆ 50 ಪೈಸೆ, 30 ಪೈಸೆ ಬೇಯಿಸಿದ ಮೊಟ್ಟೆ ಸುಲಿಯಲು, 20 ಪೈಸೆ ಸಾಗಾಣಿಕೆಗೆ ಹೀಗೆ ನಿಗದಿಪಡಿಸಿದೆ. ಸದ್ಯಕ್ಕೇನು ಗ್ಯಾಸ್ ಸ್ಟವ್, ಸಿಲಿಂಡರ್ ಖರೀದಿಗೆಲ್ಲ ದುಡ್ಡನ್ನು ನೀಡುತ್ತಿದೆ. ಖಾಲಿಯಾದ ಸಿಲಿಂಡರ್ ರೀಫಿಲ್ಲಿಂಗ್‌ಗೆ ಇಂಧನದ 50 ಪೈಸೆಯಲ್ಲೇ ಸರಿದೂಗಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಮೊಟ್ಟೆಗೆ ₹5.50ಗೊಂದು ಇದೆ. ಇದು ಏರಿಳಿಕೆಯಾಗುತ್ತಿರುತ್ತದೆ. ಆಗ ಸುಲಿಯಲು, ಸಾಗಾಣಿಕೆಗೆ ಕೊಟ್ಟು ಗ್ಯಾಸ್ ರೀಫಿಲ್ಲಿಂಗ್‌ಗೆ ಉಳಿಯುವುದೇ ಇಲ್ಲ. ರೀಫಿಲ್ಲಿಂಗ್ ಕೈಯಿಂದ ನೀಡಬೇಕೇ? ಎಂಬ ಪ್ರಶ್ನೆ ಶಿಕ್ಷಕರದ್ದು. ಮೊಟ್ಟೆ ದರ ಏರಿಳಿಕೆಯಾಗುವುದರಿಂದ ಪ್ರತಿಮಕ್ಕಳಿಗೆ ಈಗಿರುವ ₹6ರಿಂದ ₹8ಕ್ಕೆ ಹೆಚ್ಚಿಸಬೇಕು. ಇಲ್ಲವೇ ಗ್ಯಾಸ್ ರೀಫಿಲ್ಲಿಂಗ್ ದರವನ್ನಾದರೂ ನೀಡಬೇಕು ಎಂಬ ಆಗ್ರಹ ಶಿಕ್ಷಕರದ್ದು.₹2.51 ಕೋಟಿ ಬಿಡುಗಡೆಜಿಲ್ಲೆಯಲ್ಲಿ 1128 ಶಾಲೆಗಳಿವೆ. ಇವುಗಳಲ್ಲಿ 140 ಶಾಲೆಗಳಲ್ಲಿ ಈಗಾಗಲೇ ಪರಿಕರ ಇರುವುದರಿಂದ ಖರೀದಿಸುವ ಪ್ರಮೇಯ ಬರಲ್ಲ. ಉಳಿದೆಡೆ ಗ್ಯಾಸ್ ಸಿಲಿಂಡರ್, ಸ್ಟವ್, ಪಾತ್ರೆ ಖರೀದಿಸಲು ₹2.51 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಧಾರವಾಡ ಪಿಎಂ ಪೋಷಣ ಶಿಕ್ಷಣಾಧಿಕಾರಿ ರೂಪಾ ಪುರಮಕರ ಹೇಳಿದ್ದಾರೆ.ದರ ಹೆಚ್ಚಿಸಲಿ
ಮೊಟ್ಟೆ ಬೇಯಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಇದೀಗ ಪರಿಕರ ಖರೀದಿಗೆ ಅನುದಾನ ನೀಡಿರುವುದು ಸಂತಸಕರ. ಆದರೆ, ಗ್ಯಾಸ್ ರೀಫಿಲ್ಲಿಂಗ್‌ಗೂ ಹಣ ನೀಡಬೇಕು. ಇಲ್ಲವೇ ಮೊಟ್ಟೆ ದರವನ್ನಾದರೂ ಹೆಚ್ಚಿಸಿದರೆ ಸೂಕ್ತ ಎಂದು ತಾಲೂಕು ಶಿಕ್ಷಕರ ಸಂಘ ಅಧ್ಯಕ್ಷ ಮಂಜುನಾಥ ಜಂಗಲಿ ಆಗ್ರಹಿಸಿದ್ದಾರೆ.