ಜಿಲ್ಲೆಯಲ್ಲಿ ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ. ಮದ್ಯ ಮಾರಾಟದಲ್ಲಿ ಅಲ್ಪ ಕುಸಿತವಾಗಿದೆ. ಆದರೆ ಉತ್ತಮ ಆರ್ಥಿಕ ವಹಿವಾಟು ನಡೆದಿದ್ದು ಸಂಪನ್ಮೂಲವೂ ಹರಿದು ಬಂದಿದೆ ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್. ತಿಳಿಸಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಸರ್ಕಾರದ ಪ್ರಮುಖ ಆದಾಯದ ಮೂಲವಾದ ಅಬಕಾರಿ ಇಲಾಖೆಯಲ್ಲಿ 2025- 26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಮದ್ಯ ವಹಿವಾಟು ನಡೆದಿದ್ದು, ಶಾಶ್ವತ ಬರಪೀಡಿತ ಜಿಲ್ಲೆಯಿಂದಲೇ ಸುಮಾರು ₹400 ಕೋಟಿ ಮದ್ಯ ಮಾರಾಟವಾಗಿದೆ.

2025ರ ಏಪ್ರಿಲ್‌ನಿಂದ ಅನೇಕ ಮದ್ಯಗಳ ಮತ್ತು ಬಿಯರ್‌ಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದ್ದರೂ ಜಿಲ್ಲೆಯ ಮದ್ಯಪ್ರಿಯರು ಮಾತ್ರ ಇದ್ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳದೇ ಹೆಚ್ಚೆಚ್ಚು ಖರೀದಿ ಮಾಡಿದ ಹಿನ್ನೆಲೆ 2024- 25ನೇ ಸಾಲಿಗಿಂತ 2025- 26ನೇ ಸಾಲಿನಲ್ಲಿ ಲಿಕ್ಕರ್ ಮತ್ತು ಬಿಯರ್ (ಬಾಕ್ಸ್‌ಗಳ ಲೆಕ್ಕದಲ್ಲಿ) ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ ಬೆಲೆಗಳಲ್ಲಿ ಭಾರಿ ಏರಿಕೆಯಿಂದಾಗಿ ಅಬಕಾರಿ ಆದಾಯ ಅಧಿಕವಾಗಿದೆ.

ಮಾರಾಟ ವಿವರ: 2024- 25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟದಿಂದ ₹306.34 ಕೋಟಿ ವ್ಯವಹಾರ ನಡೆದಿತ್ತು. 2025- 26ನೇ ಸಾಲಿನಲ್ಲಿ ಬೆಲೆ ಏರಿಕೆ ಹಾಗೂ ನಾನಾ ಕಾರಣದಿಂದ 8.35 ಲಕ್ಷ ಬಾಕ್ಸ್ (ಕಳೆದ ಬಾರಿಗಿಂತ 5 ಲಕ್ಷ ಕಡಿಮೆ) ಮಾರಾಟವಾಗಿದೆ. ಆದರೆ, ₹340.54 ಕೋಟಿ ಮೊತ್ತದ ವ್ಯವಹಾರ ದಾಖಲಾಗಿದೆ. ಕಳೆದ ಬಾರಿಗಿಂತ ಲಿಕ್ಕರ್ ಮಾರಾಟದಲ್ಲಿ ₹35 ಕೋಟಿ ಮೊತ್ತದ ವ್ಯವಹಾರ ಅಧಿಕವಾಗಿದೆ.

ಬೆಲೆ ಏರಿಕೆ ಬಿಸಿ ಬಿಯರ್‌ಗೆ: ಬಿಯರ್ ಮಾರಾಟದಲ್ಲಿ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ₹3 ಕೋಟಿ ಮೊತ್ತದ ಕಡಿಮೆ ಪ್ರಗತಿ ಸಾಧಿಸಿದೆ. ಬಿಯರ್ ದರದಲ್ಲಿ ಸರ್ಕಾರ ಮಾಡಿರುವ ಭಾರಿ ಪ್ರಮಾಣದ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿದೆ. 2024- 25ನೇ ಸಾಲಿನಲ್ಲಿ 4.09 ಲಕ್ಷ ಬಾಕ್ಸ್ ಮಾರಾಟವಾಗಿ, 50.05 ಕೋಟಿ ಆರ್ಥಿಕ ಸಂಪನ್ಮೂಲ ಹರಿದು ಬಂದಿತ್ತು. 2025- 26ನೇ ಸಾಲಿನಲ್ಲಿ 3.38 ಲಕ್ಷ ಬಾಕ್ಸ್(ಕಳೆದ ಬಾರಿಗಿಂತ 71 ಸಾವಿರ ಬಾಕ್ಸ್ ಕಡಿಮೆ) ಮಾರಾಟವಾಗಿ ₹47.05 ಕೋಟಿ ಮೊತ್ತದ ವಹಿವಾಟು ಬಿಯರ್ ಮಾರಾಟದಿಂದ ನಡೆದಿದೆ.

ಅಲ್ಪ ಕುಸಿತ: ಜಿಲ್ಲೆಯಲ್ಲಿ ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ. ಮದ್ಯ ಮಾರಾಟದಲ್ಲಿ ಅಲ್ಪ ಕುಸಿತವಾಗಿದೆ. ಆದರೆ ಉತ್ತಮ ಆರ್ಥಿಕ ವಹಿವಾಟು ನಡೆದಿದ್ದು ಸಂಪನ್ಮೂಲವೂ ಹರಿದು ಬಂದಿದೆ ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್. ತಿಳಿಸಿದ್ದಾರೆ.

ಮದ್ಯ ಮಾರಾಟದ ವಿವರ(ಬಾಕ್ಸ್‌ಗಳ ಲೆಕ್ಕದಲ್ಲಿ)

ವಲಯ 2025- 26 2024-25

ಗದಗ 293535 294012 ಮುಂಡರಗಿ 104099 106798ನರಗುಂದ 97085 98484 ರೋಣ 173831 171667ಶಿರಹಟ್ಟಿ 166109 169667

ಬಿಯರ್ ಮಾರಾಟ(ಬಾಕ್ಸ್‌ಗಳಲ್ಲಿ)

ವಲಯ 2025-26 2024- 25

ಗದಗ 141172 170509

ಮುಂಡರಗಿ 30782 36198ನರಗುಂದ 28748 34537ರೋಣ 79671 96839ಶಿರಹಟ್ಟಿ 62433 73635