ಸಾರಾಂಶ
ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಒಬ್ಬಂಟಿ, ಹೆದರಿದ್ದಾರೆ, ಬೆದರಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇಡೀ ನಾಡಿನ ಜನರಿದ್ದಾರೆ. ಸಿದ್ದರಾಮಯ್ಯ ಒಬ್ಬಂಟಿಯಾಗಿ ಬೆಳೆದ ನಾಯಕರಲ್ಲ, ಅವರೊಬ್ಬ ಜನನಾಯಕ. ಬದಲಾದ ರಾಜಕೀಯ ಕ್ಷಿತಿಜದಲ್ಲಿ ವಿಶ್ವನಾಥ್ ಅವರು ಕೂಡ ಅಹಿಂದ ನಾಯಕನ ಅಣಿಯಲು ಮುಂದಾಗಿರುವುದು ದುರ್ದೈವದ ಸಂಗತಿ.
ಕನ್ನಡಪ್ರಭ ವಾರ್ತೆ ಮೈಸೂರು
ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸುತ್ತಿರುವ ಬಿಜೆಪಿ- ಜೆಡಿಎಸ್ ಕುಚೇಷ್ಟೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ದನಿಗೂಡಿಸಿರುವುದು ನೋವು ತಂದಿದೆ. ಸಿದ್ದರಾಮಯ್ಯ ಅವರು ಯಾವತ್ತಿಗೂ ಒಬ್ಬಂಟಿಯಲ್ಲ. ಅವರೊಂದಿಗೆ ಇಡೀ ಕನ್ನಡನಾಡಿನ ಜನರಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ತಿಳಿಸಿದ್ದಾರೆ.ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಒಬ್ಬಂಟಿ, ಹೆದರಿದ್ದಾರೆ, ಬೆದರಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇಡೀ ನಾಡಿನ ಜನರಿದ್ದಾರೆ. ಸಿದ್ದರಾಮಯ್ಯ ಒಬ್ಬಂಟಿಯಾಗಿ ಬೆಳೆದ ನಾಯಕರಲ್ಲ, ಅವರೊಬ್ಬ ಜನನಾಯಕ. ಬದಲಾದ ರಾಜಕೀಯ ಕ್ಷಿತಿಜದಲ್ಲಿ ವಿಶ್ವನಾಥ್ ಅವರು ಕೂಡ ಅಹಿಂದ ನಾಯಕನ ಅಣಿಯಲು ಮುಂದಾಗಿರುವುದು ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಆಶಾಕಿರಣ ಡಿ. ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದು, ಹಿಂದುಳಿದ ವರ್ಗಕ್ಕೆ ಸೇರಿದ ಎಂ. ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾದವರಿಗೆ ಈ ವರ್ಗಗಳ ಬಗ್ಗೆ ಕಾಳಜಿ, ಪ್ರೀತಿ ಇರಬೇಕಿತ್ತು. ಕರ್ನಾಟಕ ರಾಜಕಾರಣದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿಗಳಿಗೆ ಸಂಕಷ್ಟ ಒಡ್ಡುತ್ತಾ ಬಂದಿರುವ ನಿದರ್ಶನಗಳು ನಮ್ಮ ಕಣ್ಣು ಮುಂದಿವೆ. ಅಂತಹ ಬೆಳವಣಿಗೆ ಈಗಲೂ ನಡೆಯುತ್ತಿರುವುದನ್ನು ನಾಡಿನ ಶೋಷಿತ ವರ್ಗ ತೀವ್ರಗಣ್ಣಿನಿಂದ ನೋಡುತ್ತಿದೆ ಎಂಬುದನ್ನು ವಿಶ್ವನಾಥ್ ಮನಗಾಣಬೇಕು ಎಂದು ಅವರು ತಿಳಿಸಿದ್ದಾರೆ.ಅಧಿಕಾರ ಸಿಕ್ಕಾಗಲೆಲ್ಲ ತವರು ಜಿಲ್ಲೆ ಮೈಸೂರಿಗೆ ಕಾಮಧೇನುವಂತೆ ಅಭಿವೃದ್ಧಿ ಪರ್ವವನ್ನೇ ಸೃಷ್ಟಿಸಿದ್ದಾರೆ. ಹೀಗಿದ್ದು ಅಸೂಯೆಯಿಂದ ಅವರನ್ನು ಹಳಿಯಲು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
500ನೇ ಕನಕದಾಸರ ಜಯಂತ್ಯೋತ್ಸವದ ರೂವಾರಿ ಕೂಡ ಅವರೇ. ಇಂದು ನಾಡಿನಲ್ಲಿ ಕುರುಬ ಸಮುದಾಯ ಯಾವುದೇ ಹಿಂಜರಿಕೆಯಿಲ್ಲದೆ ತಲೆ ಎತ್ತಿ ನಿಂತಿದೆ ಎಂದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದ್ದು, ಅವರಿಂದ ಕುರುಬ ಸಮುದಾಯದ ಮರ್ಯಾದೆ ಹೋಗಿಲ್ಲ. ಬದಲಾಗಿ ಸಮುದಾಯಕ್ಕೆ ಶಕ್ತಿ ಬಂದಿದೆ. ಸಿದ್ದರಾಮಯ್ಯ ಕುರುಬ ಸಮುದಾಯದ ಜತೆಗೆ ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಈ ವರ್ಗಗಳ ಬೆಂಬಲ ಎಂದೆಂದಿಗೂ ಸಿದ್ದರಾಮಯ್ಯಗೆ ದೊರೆಯಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.