ಮಡಿಕೇರಿ: ಎಸ್‌ಐಆರ್, ಚುನಾವಣಾ ಆಯೋಗದ ಜವಾಬ್ದಾರಿ. ಅದರಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹೊತ್ತಲ್ಲೇ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಪಿಆರ್‌ಸಿ ಕುರಿತ ಸುತ್ತೋಲೆ ತಕ್ಷಣ ಹಿಂಪಡೆಯಬೇಕು. ಇದು ಅಕ್ರಮ ವಲಸಿಗರ ಸೇರ್ಪಡೆಗೆ ಸರ್ಕಾರ ನಡೆಸುತ್ತಿರುವ ಹುನ್ನಾರ ಎಂದು ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ವೇಳೆಯೇ ಉದ್ದೇಶಪೂರ್ವಕವಾಗಿ ಪಿಆರ್‌ಸಿ ಮಾಡಲಾಗ್ತಿದೆ. ಬಾಂಗ್ಲಾ ದೇಶದ ನುಸುಳುಕೋರರಿಗೆ ಅಸ್ಸಾಂ ಹೆಸರಿನಲ್ಲಿ ಬೋಗಸ್ ಆಧಾರ್ ಕಾರ್ಡ್ ನೀಡಿ ಅವರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಇದು ಮುಂದೆ ದೇಶದ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರಲಿದೆ. ಸಂವಿಧಾನ ಹಾಗೂ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ, ದೇಶದ ಪ್ರಜೆಯಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸಲೆಂದೇ ಈ ಸುತ್ತೋಲೆ ಹೊರಡಿಸಿದೆ ಎಂದು ಆರೋಪಿಸಿದರು. ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ನೀಡುವ ಅಧಿಕಾರವೇ ತಹಸೀಲ್ದಾರ್‌ಗೆ ಇಲ್ಲ ಎಂದಿರುವ ಕೆ.ಜಿ.ಬೋಪಯ್ಯ, ಕೇಂದ್ರ ಗೃಹ ಸಚಿವಾಲಯ ಹಾಗೂ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಅಕ್ರಮ ವಲಸಿಗರಿಗೆ, ಅರ್ಹರಲ್ಲದವರಿಗೆ ಪಿಆರ್‌ಸಿ ನೀಡುವ ಮೂಲಕ ಅವರನ್ನು ಕಾಂಗ್ರೆಸ್ ಮತದಾರರನ್ನಾಗಿ ಮಾಡಲಾಗ್ತಿದೆ. ಅವರು ಕೇಂದ್ರ ಹಾಗೂ ರಾಜ್ಯದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವು ಮುಂದೆ ದೇಶದ ಬಡ ಜನರಿಗೆ, ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ ಪಿಆರ್‌ಸಿ ಜಾರಿ ಹಿಂಪಡೆಯಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಹೇಶ್ ಜೈನಿ, ಅರುಣ್ ಕುಮಾರ್, ಮನು ಮಂಜುನಾಥ್, ಸಜಿಲ್ ಕೃಷ್ಣನ್ ಹಾಜರಿದ್ದರು.