ಸಾಮಾಜಿಕ ಪ್ರಜ್ಞೆ ಇರದಿದ್ದರೆ ಸತ್ತಂತೆ: ಅಕ್ಷತಾ

| Published : Apr 30 2024, 02:10 AM IST

ಸಾರಾಂಶ

ಸಾಮಾಜಿಕ ಪ್ರಜ್ಞೆಯನ್ನು ಕಳೆದುಕೊಂಡು ಸಮಾಜ ಸತ್ತ ಶವವಿದ್ದಂತೆ. ಜಾಗೃತಿಯನ್ನು ಕಳೆದುಕೊಂಡ ಸಮಾಜ ಸತ್ತ ಶವದ ಗೋರಿಯಿದ್ದಂತೆ ಎಂದು ಹಾವೇರಿ ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ ಹೇಳಿದರು.

ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾಮಾಜಿಕ ಪ್ರಜ್ಞೆಯನ್ನು ಕಳೆದುಕೊಂಡು ಸಮಾಜ ಸತ್ತ ಶವವಿದ್ದಂತೆ. ಜಾಗೃತಿಯನ್ನು ಕಳೆದುಕೊಂಡ ಸಮಾಜ ಸತ್ತ ಶವದ ಗೋರಿಯಿದ್ದಂತೆ ಎಂದು ಹಾವೇರಿ ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ ಹೇಳಿದರು.

ಕಡಬಗೆರೆ ಗಾಂಧಿ ಮೈದಾನದಲ್ಲಿ ಖಾಂಡ್ಯ ಹೋಬಳಿ ದಲಿತ ಸಂಘರ್ಷ ಸಮಿತಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸತ್ತ ಸಮಾಜದಲ್ಲಿ ಯಾವುದೇ ಚಟುವಟಿಕೆ ಗಳು ನಡೆಯುವುದಿಲ್ಲ. ಅಲ್ಲಿ ಯಾವುದೇ ಜಾಗೃತಿ ಮೂಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸದಾ ಎಚ್ಚರಗೊಂಡಿರುವ ಸಮಾಜವಾಗಿರಬೇಕು. ಎಚ್ಚರಗೊಂಡಿದ್ದರೆ ಮಾತ್ರ ಕ್ರಿಯಾಶೀಲವಾಗಿರಲು ಸಾಧ್ಯ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ಪಕ್ಷ, ರಾಜಕೀಯವನ್ನು ಆಚೆ ಬಿಟ್ಟು ಬರಬೇಕಿದ್ದು, ಇಂದು ಯಾವುದೇ ಪಕ್ಷ ಗಳು ದಲಿತರನ್ನು ಉದ್ಧಾರ ಮಾಡಿಲ್ಲ. ದಲಿತರಿಗೆ ಯಾವುದೇ ಪಕ್ಷದ ನಾಯಕರು ಜೀವತ್ಯಾಗ ಮಾಡಿಲ್ಲ. ರಾಜಕಾರಣಿಗಳ ಮಕ್ಕಳು, ರಾಜಕಾರಣಿಗಳು ದಲಿತರಿರಾಗಿ ತಮ್ಮ ಬದುಕನ್ನು ತೇಯ್ದು ತ್ಯಾಗವನ್ನು ಮಾಡಿಲ್ಲ. ದಲಿತರಿಗೆ ಸರ್ವವನ್ನು ತ್ಯಾಗ ಮಾಡಿ, ಸರ್ವಸ್ವ ಕಳೆದುಕೊಂಡು ನಿಮ್ಮ ಗೌರವ, ಘನತೆಗಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ನ್ಯಾಯಕ್ಕಾಗಿ ಹೋರಾಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ನಡೆಯಬೇಕಿದೆ. ಇಂದು ಗ್ರಂಥಾಲಯ, ಶಾಲೆಗಳು ನಿರ್ಮಾಣವಾಗ ಬೇಕಾದ ಜಾಗದಲ್ಲಿ ದೇವಾಲಯಗಳು ನಿರ್ಮಾಣವಾಗುತ್ತಿದೆ. ಇದು ವಿಷಾದನೀಯ. ಹೆಚ್ಚು ಶಾಲೆಗಳನ್ನು ನಿರ್ಮಾಣ ಮಾಡಿ ಗುಣಮಟ್ಟದ ಶಿಕ್ಷಣವನ್ನು ನಾವು ಪಡೆಯಬೇಕಿದೆ. ಶಿಕ್ಷಣದಿಂದ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಿದ್ದು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗೆರೆಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಹಾಗೂ ದೇವದಾನ ಗ್ರಾಮದ ಸರ್ವೆ ನಂ.279ರಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.ಖಾಂಡ್ಯ ಹೋಬಳಿ ಡಿಎಸ್‌ಎಸ್ ಅಧ್ಯಕ್ಷ ಬಿ.ಕೆ.ರಮೇಶ್, ಜಿಪಂ ಮಾಜಿ ಸದಸ್ಯ ಎಸ್.ಪೇಟೆ ಸತೀಶ್, ಡಿಎಸ್‌ಎಸ್ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮಂಜುನಾಥ್ ಕೂದುವಳ್ಳಿ, ಲಕ್ಷ್ಮಣ್ ಹುಣಸೇಮಕ್ಕಿ, ಗಿರೀಶ್, ವಸಂತ, ಹರೀಶ್ ಬಾಸಾಪುರ, ರಾಘವೇಂದ್ರ ಒಳಗೋಡು ಮತ್ತಿತರರು ಹಾಜರಿದ್ದರು.೨೯ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಕಡಬಗೆರೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ದೇವದಾನ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ, ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಕೆ.ಸಿ.ಅಕ್ಷತಾ, ಬಿ.ಕೆ.ರಮೇಶ್, ಎಸ್.ಪೇಟೆ ಸತೀಶ್, ಶ್ರೀನಿವಾಸ್ ಮತ್ತಿತರರು ಇದ್ದರು.