ಆಸ್ತಿ ವೈಷಮ್ಯದಿಂದ ಮಹಿಳೆ ಕೊಲೆ: ಆರೋಪಿ ಪುತ್ತೂರಿನಲ್ಲಿ ಸೆರೆ

| Published : Sep 27 2024, 01:17 AM IST / Updated: Sep 27 2024, 01:18 AM IST

ಆಸ್ತಿ ವೈಷಮ್ಯದಿಂದ ಮಹಿಳೆ ಕೊಲೆ: ಆರೋಪಿ ಪುತ್ತೂರಿನಲ್ಲಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವರ್ಷ ಎಂಟು ತಿಂಗಳ ಹಿಂದೆ ಆಸ್ತಿ ವೈಷಮ್ಯದಲ್ಲಿ ಮಹಿಳೆಯನ್ನು ಕತ್ತಿಯಿಂದ ಕಡೆದು ಕೊಲೆ ಮಾಡಿ ಮತ್ತೋರ್ವ ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ಮೃತ ಪ್ರೇಮಾ ಅವರ ಗಂಡನ ಅಕ್ಕನ ಮಗ, ಮಂಗಳೂರು ತಣ್ಣೀರುಬಾವಿ ನಿವಾಸಿ ರಾಜೇಶ್ (42) ಬಂಧಿತ ಆರೋಪಿ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಎರಡು ವರ್ಷ ಎಂಟು ತಿಂಗಳ ಹಿಂದೆ ಆಸ್ತಿ ವೈಷಮ್ಯದಲ್ಲಿ ಮಹಿಳೆಯನ್ನು ಕತ್ತಿಯಿಂದ ಕಡೆದು ಕೊಲೆ ಮಾಡಿ ಮತ್ತೋರ್ವ ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ಮೃತ ಪ್ರೇಮಾ ಅವರ ಗಂಡನ ಅಕ್ಕನ ಮಗ, ಮಂಗಳೂರು ತಣ್ಣೀರುಬಾವಿ ನಿವಾಸಿ ರಾಜೇಶ್ (42) ಬಂಧಿತ ಆರೋಪಿ. ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು.

2022ರ ಫೆ.7ರಂದು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪ್ರೇಮಾ ಮತ್ತು ತಂಗಿ ವೀಣಾ ಅವರ ತಲೆ, ಕುತ್ತಿಗೆ, ದೇಹದ ಭಾಗಗಳಿಗೆ ಅಪರಿಚಿತರು ಹರಿತ ಕತ್ತಿಯಿಂದ ಕಡಿದು ಪ್ರೇಮಾ ಅವರನ್ನು ಕೊಂದಿದ್ದರು. ವೀಣಾ ಗಂಭೀರ ಗಾಯಗೊಂಡಿದ್ದರು. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ಸಂದರ್ಭ ಆಸ್ತಿಯ ವಿಚಾರದಲ್ಲಿ ಕುಟುಂಬಸ್ಥರೇ ಕೃತ್ಯ ಎಸಗಿದ ಶಂಕೆ ವ್ಯಕ್ತವಾಗಿತ್ತು. ಹೆಚ್ಚಿನ ತನಿಖೆ ನಡೆಸಿದ ಸಂದರ್ಭ, ಪ್ರೇಮಾ ಅವರ ಗಂಡ ಸೋಮಶೇಖರ್‌ ಅವರ ಅಕ್ಕನ ಮಗ ರಾಜೇಶ್ ಕೃತ್ಯ ನಡೆಸಿದ್ದು ಪತ್ತೆಯಾಯಿತು.ಕೃತ್ಯದ ಸ್ಥಳದ ಸಿಸಿ ಟಿವಿ ಪರಿಶೀಲಿಸಿದಾಗ, ಪ್ರೇಮಾ ಹಾಗೂ ಅವರ ತಂಗಿ ನಡೆದುಕೊಂಡು ಹೋಗುವ ಹಾಗೂ ರಾಜೇಶ ಬೈಕಿನಲ್ಲಿ ಅವರನ್ನು ಹಿಂಬಾಲಿಸಿರುವ ದೃಶ್ಯಾವಳಿ ಕಂಡು ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಕುಟ್ಟ ವೃತ್ತ ನಿರೀಕ್ಷಕ ಸಿ.ಎ ಮಂಜಪ್ಪ, ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ. ರವಿಶಂಕರ್ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಆರೋಪಿ ತಲೆ ಮರೆಸಿದ್ದ. ಜೊತೆಗೆ ಪೊಲೀಸ್‌ ಸಿಬ್ಬಂದಿ ಶ್ರೀಮಂಗಲ ಪೊಲೀಸ್ ಠಾಣೆ ಎ.ಎಸ್.ಐ. ಪ್ರಮೋದ್ ಮತ್ತು ಪೊನ್ನಂಪೇಟೆ ಠಾಣೆಯ ಕ್ರೈಂ ಸಿಬ್ಬಂದಿ ಮಹದೇವಸ್ವಾಮಿ ಅವರನ್ನು ನಿಯೋಜಿಸಿ ಆರೋಪಿಯನ್ನು ಸೆ.24ರಂದು ಪುತ್ತೂರಿನಲ್ಲಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ವಿರಾಜಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕ ಮೋಹನ್ ಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಶ್ರೀಮಂಗಲ ಉಪನಿರೀಕ್ಷಕ ರವೀಂದ್ರ ಹಾಗೂ ಸಿಬ್ಬಂದಿ ಹಾಜರಿದ್ದರು.