ಮಹಿಳೆಯರು ಸಾಂಸಾರಿಕ ಜೀವನಕ್ಕೆ ಮಾತ್ರ ಸೀಮಿತರಾಗದೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದು ಸೊರಬ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ಮಹಿಳೆಯರು ಸಾಂಸಾರಿಕ ಜೀವನಕ್ಕೆ ಮಾತ್ರ ಸೀಮಿತರಾಗದೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದು ಸೊರಬ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ಹೇಳಿದರು.ಪಟ್ಟಣದ ಗಿರಿಜಾಶಂಕರ ಸಭಾ ಭವನದಲ್ಲಿ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಮತ್ತು ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ೪ನೇ ವರ್ಷದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ಗೌರವಿಸುವ ಸಮಾಜಗಳಲ್ಲಿ ಶಾಂತಿ ನೆಲೆಸುತ್ತದೆ. ಮಹಿಳಾ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು. ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಪ್ರಗತಿ ಮತ್ತು ಸಂಘಟನೆ ಚುಂಚಾದ್ರಿ ಮಹಿಳಾ ವೇದಿಕೆಯ ಧ್ಯೇಯ. ಕೃಷಿಕ ಮಹಿಳೆಯರು ಕೃಷಿಯ ಜೊತೆಯಲ್ಲಿ ಕೈಕಸುಬುಗಳನ್ನು ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುವ ಮೂಲಕ ಹೊರ ಪ್ರಪಂಚದ ಅರಿವು ಹೊಂದಬೇಕು. ಮಹಿಳೆ ಇಂದು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕ್ರೀಡೆ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ಮಹಿಳೆಯರ ಪ್ರತಿಭೆಯನ್ನು ಪುರಸ್ಕರಿಸಿ ಗೌರವಿಸುವುದು ವೇದಿಕೆಯ ಉದ್ದೇಶ ಎಂದರು.ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದ ಶಿರಾಳಕೊಪ್ಪದ ಶ್ರೀಧರ ಇಂಟರ್ ನ್ಯಾಷನಲ್ ಸ್ಕೂಲ್‌ನ ಶಿಕ್ಷಕಿ ಪಿ.ಎಸ್. ಸುನಿತಾ ಮಾತನಾಡಿ, ಮಹಿಳೆ ಎದುರಿಸುತ್ತಿರುವ ಸವಾಲುಗಳಿಂದ ಹೊರಬಂದು ಸಬಲೀಕರಣಗೊಂಡಾಗ ಮಾತ್ರ ಶೋಷಣೆಯಿಂದ ಮುಕ್ತಿ ಹೊಂದಬಹುದು. ಮಹಿಳೆ ತನ್ನ ನಿತ್ಯ ಜೀವನದಲ್ಲಿ ಧನಾತ್ಮಕವಾಗಿ ಆಲೋಚಿಸಿ ಪ್ರಗತಿ ಪಥದತ್ತ ಸಾಗಬೇಕು. ಸ್ತ್ರೀ ಸಮಾಜ ಮುಖ್ಯ ವಾಹಿನಿಗೆ ಬಂದು ತನ್ನ ನಿರ್ಧಾರವನ್ನು ತಾನು ತೆಗೆದುಕೊಳ್ಳುವಂತಾದಾಗ ಮಾತ್ರ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದರು.
ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಬಿ. ಮಂಜಪ್ಪ ಬನದಕೊಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಮಹಿಳೆ ಇಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ಮಹಿಳೆಯರೆ ಕುಟುಂಬದಲ್ಲಿ ನಿರ್ಣಾಯಕ ಎಂದರು.ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಉಮಾಕಾಂತ ನೆಲ್ಲೂರು, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಸಾಗರ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಉಮಾ ಬಸವರಾಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಲೋಚನ ಸುಬ್ರಾಯ ನೆಲ್ಲೂರು, ಅಶ್ವಿನಿ ಹೊಸಕೊಪ್ಪ, ಮಮತಾ ಭೈರಪ್ಪ ನಿಸರಾಣಿ, ಗೋದಾವರಿ ಹೊಸಕೊಪ್ಪ, ಕವನ ಹುಲೇಮರಡಿ, ಗೋದಾವರಿ ಗಣಪತಪ್ಪ ಯಕ್ಷಿ, ಜ್ಯೋತಿ ಉಮಾಕಾಂತ ನೆಲ್ಲೂರು, ನೇತ್ರಾ ನಾಯ್ಕ್, ಸರಿತಾ ರಂಗಸ್ವಾಮಿ, ವೀಣಾ ಗೋಸಿ, ಪ್ರೇಮ ಮಂಜಪ್ಪ, ವರದರಾಜ, ಕನ್ನಮ್ಮ ಮತ್ತಿತರರು ಉಪಸ್ಥಿತರಿದ್ದರು. ಸವಿತ ಕೃಷ್ಣಪ್ಪ ನಿರೂಪಿಸಿ, ಸರಿತಾ ರಂಗಸ್ವಾಮಿ ಸ್ವಾಗತಿಸಿ, ಜ್ಯೋತಿ ಉಮಾಕಾಂತ ನೆಲ್ಲೂರು ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಮಹಿಳೆಯರಿಗೆ ವಿವಿಧ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.