ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಸನ್ಯಾಸಿಹಳ್ಳಿಯಲ್ಲಿ ನಾಲ್ಕು ತಿಂಗಳಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದ್ದು ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ದೈನಂದಿನ ಜೀವನ ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ನೀರಿನ ಸರಬರಾಜು ಇಲ್ಲದ ಕಾರಣ ನಾಗರಿಕರು ಸುಮಾರು ಎರಡು ಕಿಲೋಮೀಟರ್ ದೂರದಿಂದ ಕುಡಿಯುವ ನೀರನ್ನು ತಂದುಕೊಳ್ಳಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಲವು ಸಭೆಗಳಲ್ಲಿ ಹೇಳಿಕೆ ನೀಡುತ್ತಿರುವುದಲ್ಲದೆ, ತಾಲೂಕು ಮಟ್ಟದ ಅಧಿಕಾರಿಗಳ ಸಭೆಗಳನ್ನು ನಡೆಸಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವಂತೆ ಸೂಚನೆ ನೀಡಿರುವುದಾಗಿ ಹೇಳಲಾಗುತ್ತಿದೆ. ಜೊತೆಗೆ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಬಾರದೆಂದು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಈ ಸೂಚನೆಗಳು ಬಿಳಿ ಕಾಗದದಲ್ಲೇ ಉಳಿದಂತಾಗಿದ್ದು, ಸನ್ಯಾಸಿಹಳ್ಳಿ ಗ್ರಾಮದಲ್ಲಿ ಮಾತ್ರ ಸಮಸ್ಯೆ ಇನ್ನೂ ಬಗೆಹರಿಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಈ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಪಟ್ಟಣಕ್ಕೆ ಸಮೀಪದಲ್ಲಿ ಯಗಚಿ ಜಲಾಶಯ ಇದ್ದರೂ ಸಹ ಸನ್ಯಾಸಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಆಗದಿರುವುದು ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ಯಗಚಿ ಜಲಾಶಯದಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಕುಡಿಯುವ ನೀರು ಪೂರೈಸಲಾಗುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಗ್ರಾಮಗಳಿಗೆ ಮಾತ್ರ ನೀರು ಸಿಗದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಈ ಕುರಿತು ಸ್ಥಳೀಯ ನಿವಾಸಿ ಶ್ರೀನಿವಾಸ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಲವು ಆಶ್ವಾಸನೆಗಳನ್ನು ನೀಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಜನರ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರನ್ನು ಕೂಡ ಒದಗಿಸಲು ವಿಫಲವಾಗಿರುವುದು ದುರಾದೃಷ್ಟಕರ ಸಂಗತಿ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ಗ್ರಾಮಸ್ಥರು ಎಲ್ಲರೂ ಸೇರಿ ಖಾಲಿ ಕೊಡಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗೌರಮ್ಮ, ಕಮಲಮ್ಮ, ಚಿಕ್ಕಮ್ಮ, ಸೋಮಶೇಖರ್‌, ಧರ್ಮಣ್ಣ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.