ಸಾರಾಂಶ
ಕಳೆದ ೩ ವರ್ಷಗಳಿಂದ ಖಾಸಗಿ ಕೊಳವೆ ಬಾವಿಯಿಂದ ನೀರು ಕೊಡಲಾಗುತ್ತಿದ್ದರೂ ಅವರಿಗೆ ಸರಿಯಾದ ಹಣ ಸಂದಾಯ ಮಾಡಿಲ್ಲವೆಂದು ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ
ಕನ್ನಡಪ್ರಭ ವಾರ್ತೆ ಟೇಕಲ್
ಸಮೀಪದ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ತೊರಹಳ್ಳಿಯಲ್ಲಿ ಕಳೆದ ಮೂರು ವರ್ಷದಿಂದ ಕುಡಿಯುವ ನೀರಿನ ತೊಂದರೆ ಕುರಿತು ಗ್ರಾಪಂ ಸದಸ್ಯೆ ರತ್ನಮ್ಮ ಶ್ರೀಧರಮೂರ್ತಿ ಬಳಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಯದ ಕಾರಣ ಮಹಿಳೆಯರು ಹುಳದೇನಹಳ್ಳಿ ಪಂಚಾಯಿತಿಯ ಮುಂದೆ ಖಾಲಿ ಬಿಂದಿಗೆಗಳೊಂದಿಗೆ ಧರಣಿ ನಡೆಸಿದರು.ಕಳೆದ ೩ ವರ್ಷಗಳಿಂದ ಖಾಸಗಿ ಕೊಳವೆ ಬಾವಿಯಿಂದ ನೀರು ಕೊಡಲಾಗುತ್ತಿದ್ದರೂ ಅವರಿಗೆ ಸರಿಯಾದ ಹಣ ಸಂದಾಯ ಮಾಡಿಲ್ಲವೆಂದು ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲವೆಂದು ಆರೋಪಿಸಿ, ಸದಸ್ಯೆ ರತ್ನಮ್ಮ ಶ್ರೀಧರ ಮೂರ್ತಿ ಪ್ರತಿ ಮಾಸಿಕ ಸಾಮಾನ್ಯ ಸಭೆ ಕರೆದಾಗ ಗ್ರಾಮದ ಸಮಸ್ಯೆ ಬಗ್ಗೆ ಹೇಳಿದ್ದರೂ ಕ್ರಮವಹಿಸಿಲ್ಲ. ೧೫ನೇ ಹಣಕಾಸಿನಡಿ ಗ್ರಾಮದ ಅಭಿವೃದ್ಧಿಗೆ, ಇತರೆ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿಲ್ಲವೆಂದು ಆರೋಪಿದರು.
ಖಾಲಿ ಬಿಂದಿಗೆಗಳೊಂದಿಗೆ ಧರಣಿ ಕುಳಿತ ಮಹಿಳೆಯರು ನೀರು ಕೊಡುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡಿದರು.ಪಂಚಾಯಿತಿಗೆ ಎಷ್ಟು ಭಾರಿ ಮನವಿ ಸಲ್ಲಿಸಿದರೂ ಗಮನಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಹಾಗೂ ಪಿಡಿಒ ಸೋಮೇಶ್ ತೊರಹಳ್ಳಿ ಬಂದು ಮಹಿಳೆಯರ ಬಳಿ ಮಾತನಾಡಿ, ಒಂದು ತಿಂಗಳು ಒಳಗೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಖಾಸಗಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಮಹಿಳೆಯರು ಧರಣಿ ಕೈಬಿಟ್ಟರು.