ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಕುಟುಂಬಗಳ ನಡುವಿನ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟ - 2024ರ ಸ್ಪರ್ಧೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು, ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದು ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ಮನವಿ ಮಾಡಿದರು.
ಇಲ್ಲಿನ ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯನ್ನು ಏಪ್ರಿಲ್ 18 ರಿಂದ 21 ರವರೆಗೆ ಆಯೋಜಿಸಲಾಗಿದೆ.
ಮಹಿಳಾ ಮತ್ತು ಪುರುಷರ ತಂಡಗಳು ಪಾಲ್ಗೊಳ್ಳಲು ಅವಕಾಶವಿದೆ. ಪ್ರತಿ ತಂಡದಲ್ಲಿ ಏಳು ಮಂದಿ ಆಟಗಾರರು ಪಾಲ್ಗೊಳ್ಳಬಹುದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ನೋಂದಾಯಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದರು.
2022ರಲ್ಲಿ ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಮೊದಲ ವರ್ಷದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಹಾಗೂ 2023ರಲ್ಲಿ ಟಿ. ಶೆಟ್ಟಿಗೇರಿಯ ಚೆಟ್ಟಂಡ ಕುಟುಂಬಸ್ಥರು ಎರಡನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಿದ್ದು ಇದೀಗ ಮೂರನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಕ್ರೀಡಾ ಸಮಿತಿ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಮಾತನಾಡಿ ಉದ್ಘಾಟನಾ ಕಾರ್ಯಕ್ರಮದಂದು ಬೆಳಗ್ಗೆ ನಾಪೋಕ್ಲು ಪಟ್ಟಣದಿಂದ ಆಟದ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಂತಿಮ ದಿನದಂದು ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ಹಗ್ಗಜಗ್ಗಾಟ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ರಮೇಶ್ ಮೊಣ್ಣಯ್ಯ, ರವಿ ಕರುಂಬಯ್ಯ, ಕಾರ್ಯದರ್ಶಿ ಚೇತನ್, ಸಹ ಕಾರ್ಯದರ್ಶಿ ಪಳಂಗಪ್ಪ ಇದ್ದರು.