ಇಂದು ಕಾಂಗ್ರೆಸ್ ನ 5ನೇ ಗ್ಯಾರಂಟಿ ಯುವನಿಧಿಗೆ ಚಾಲನೆ: ಟಿಡಿ ರಾಜೇಗೌಡ

| Published : Jan 12 2024, 01:47 AM IST / Updated: Jan 12 2024, 05:41 PM IST

ಸಾರಾಂಶ

ಜ.12ರ ಶುಕ್ರವಾರ ವಿವೇಕಾನಂದ ಜಯಂತಿಯಂದು ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿದ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆ ಜಾರಿಗೊಳ್ಳುತ್ತಿದ್ದು ಇದು ದೇಶದಲ್ಲಿಯೇ ಇತಿಹಾಸ ನಿರ್ಮಿಸುವ ದಿನ ಎಂದು ಶಾಸಕರ ಕಚೇರಿ ಸಮರ್ಪಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು

ಕನ್ನಡಪ್ರಭ ವಾರ್ತೆ, ಕೊಪ್ಪ

ಜ.12ರ ಶುಕ್ರವಾರ ವಿವೇಕಾನಂದ ಜಯಂತಿಯಂದು ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿದ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆ ಜಾರಿಗೊಳ್ಳುತ್ತಿದ್ದು ಇದು ದೇಶದಲ್ಲಿಯೇ ಇತಿಹಾಸ ನಿರ್ಮಿಸುವ ದಿನ ಎಂದು ಶಾಸಕ ಟಿ.ಡಿ.ರಾಜೇಗೌಡ ಬಣ್ಣಿಸಿದರು.

ಗುರುವಾರ ಕೊಪ್ಪ ಪಟ್ಟಣದ ಶಾಸಕರ ಕಚೇರಿ ಸಮರ್ಪಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ಪಕ್ಷಗಳು ಚುನಾವಣಾ ಪೂರ್ವದಲ್ಲಿ ಭರವಸೆ ನೀಡುವುದು ಸಹಜ. ಆದರೆ ಕೆಲವೊಂದನ್ನು ಮಾತ್ರ ಪೂರೈಸುತ್ತದೆ. 

2023ರ ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಬಡವರಿಗೆ ಅನ್ನಭಾಗ್ಯ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ, ಕುಟುಂಬದ ಯಜಮಾನಿ ಗೆ ಮಾಸಿಕ 2000 ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ.

ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000, ಡಿಪ್ಲೊಮಾ ಪದವೀಧರರಿಗೆ 1500 ರು. ನೀಡುವ ಯುವ ನಿಧಿ ಯೋಜನೆಯೂ ಸೇರಿದಂತೆ ಚುನಾವಣಾ ಪೂರ್ವದಲ್ಲಿ ನೀಡಿದ 5 ಭರವಸೆಗಳಲ್ಲಿ 4 ಯೋಜನೆಗಳು ಈಗಾಗಲೇ ಜಾರಿಗೊಳಿಸಿದೆ.

ಜ.12ರಂದು ಯುವ ನಿಧಿ ಯೋಜನೆ ಜಾರಿಗೊಳಿಸುವ ಮೂಲಕ ಸರ್ಕಾರ ರಚನೆಯಾಗಿ ಕೇವಲ 7 ತಿಂಗಳಲ್ಲಿ ಎಲ್ಲಾ ಭರವಸೆಗಳನ್ನು ಪೂರೈಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಪದವಿ ಮುಗಿಸಿ 6 ತಿಂಗಳ ನಂತರ 2 ವರ್ಷದವರೆಗೂ ಯುವ ನಿಧಿ ಯೋಜನೆ ಸೌಲಭ್ಯ ದೊರೆಯಲಿದೆ. ಪದವಿ ಮುಗಿಸಿ ದರೂ ಉದ್ಯೋಗ ಸಿಗದೆ ಇದ್ದವರಿಗೆ ಉದ್ಯೋಗ ಹುಡುಕಿಕೊಳ್ಳಲು ಆತ್ಮಸ್ಥೈರ್ಯ ತುಂಬುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ. 

ಈವರೆಗೂ ಕೊಪ್ಪದಲ್ಲಿ 148, ನ.ರಾ.ಪುರದಲ್ಲಿ 113, ಶೃಂಗೇರಿಯಲ್ಲಿ 71 ಜನ ಸೇರಿದಂತೆ ಒಟ್ಟು 331 ಜನ ಪದವಿ ವಿದ್ಯಾರ್ಥಿಗಳು ಈಗಾಗಲೇ ನೋಂದಣೆ ಮಾಡಿದ್ದಾರೆ. 

ಇನ್ನೂ ಅನೇಕರ ನೋಂದಣಿ ಬಾಕಿ ಇದ್ದು ಇದಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ನಮ್ಮ ಕಾರ್ಯಕರ್ತರು ಫಲಾನುಭವಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಯುವನಿಧಿಗೆ ನೋದಣಿ ಮಾಡಿಸಬೇಕು. 

ಶಿವಮೊಗ್ಗದಲ್ಲಿ ಶುಕ್ರವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಶೃಂಗೇರಿ ಕ್ಷೇತ್ರದಿಂದ ಉಚಿತ 10 ಬಸ್ಸುಗಳನ್ನು ಬಿಡಲಾಗಿದ್ದು ಕಾರ್ಯಕ್ರಮಕ್ಕೆ ತೆರಳುವ ವಿದ್ಯಾರ್ಥಿಗಳ ಪೋಷಕರಿಂದ ಅನುಮತಿ ಪತ್ರ ಪಡೆಯಲಾಗಿದೆ. 

ಕ್ಷೇತ್ರದ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ತಮ್ಮ ಸ್ವಂತ ವಾಹನದಲ್ಲಿ ಅನೇಕರು ಬರಲಿದ್ದಾರೆ ಎಂದು ಮಾಹಿತಿ ನೀಡಿದರು. ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಇನೇಶ್, ಬಗರ್ ಹುಕುಂ ಸಮಿತಿ ಸದಸ್ಯರಾದ ಅನ್ನಪೂರ್ಣ ನರೇಶ್, ಮಂಜುನಾಥ್, ಪಪಂ. ಸದಸ್ಯ ರಶೀದ್, ಕೆಸವೆ ಗ್ರಾ.ಪಂ ಸದಸ್ಯರಾದ ಪರಮೇಶ್ವರ, ಪ್ರವೀಣ್ ಮುಂತಾದವರಿದ್ದರು.