ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆ ಎಂದರೆ ಒಂದು ಶಕ್ತಿ. ವಿದ್ಯಾವಂತ ಮಹಿಳೆಯರಾಗಿ, ನೀವು ಕುಟುಂಬ, ಸಮುದಾಯ ಮತ್ತು ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದ್ದೀರಿ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.ನಗರದ ತೊರವಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 17ನೇ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿಗಳೂ ಆಗಿರುವ ಅವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಮಾತನಾಡಿದರು. ಪದವಿ ಪಡೆದಿರುವ ಪ್ರತಿಯೊಬ್ಬ ಮಹಿಳೆಯೂ ಸಮಾಜದಲ್ಲಿ ಸಾಧನೆಯ ಒಂದು ಮೆಟ್ಟಿಲನ್ನು ಏರಿದಂತೆ. ಮಹಿಳಾ ಸಬಲೀಕರಣವೆಂದರೆ ಶಿಕ್ಷಣ ಅಥವಾ ಉದ್ಯೋಗ ಮಾತ್ರವಲ್ಲ. ಅದು ಆತ್ಮವಿಶ್ವಾಸ, ಸ್ವಾತಂತ್ರ‍್ಯ ಮತ್ತು ನಿರ್ಧಾರಗಳನ್ನು ತೆಗೆದುಕೊಂಡು ಅವುಗಳೊಂದಿಗೆ ನಿಂತುಕೊಳ್ಳುವ ಸಾಮರ್ಥ್ಯ ಎಂದರು.ಇದೇ ವೇಳೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಿವಿಧ ವಿಭಾಗಗಳಲ್ಲಿ ಪಿಎಚ್.ಡಿ ಗಳಿಸಿರುವ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿದರು. ಈ ವೇಳೆ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ವಿದ್ಯಾರ್ಥಿನಿಯರು ಹಾಗೂ ಪಾಲಕರು ಇದ್ದರು.
ನೀವು ವಿಶ್ವದತ್ತ ಹೆಜ್ಜೆ ಇಡುವಾಗ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ, ದೊಡ್ಡ ಕನಸು ಕಾಣಿರಿ, ಆದರೆ, ವಾಸ್ತವಿಕವಾಗಿರಿ. ನೀವು ಮಾಡುವ ಪ್ರತಿಯೊಂದರಲ್ಲಿ ಪ್ರಾಮಾಣಿಕತೆ ಕಾಪಾಡಿ. ಇತರ ಮಹಿಳೆಯರನ್ನು ಬೆಂಬಲಿಸಿ ಮತ್ತು ಉತ್ತೇಜಿಸಿ. ನಿಮ್ಮ ಬೇರುಗಳು ಮತ್ತು ಮೌಲ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ನಿಮ್ಮ ಕುಟುಂಬಕ್ಕೆ ಗೌರವ ನೀಡಿ.- ಥಾವರಚಂದ್ ಗೆಹ್ಲೋಟ್, ರಾಜ್ಯಪಾಲರು