ಕನ್ನಡಪ್ರಭ ವಾರ್ತೆ ಸಾವಳಗಿ

ಬಸವ ಜಯಂತಿಯಂದು ಹೊಸ ಕಾರು ಖರೀದಿಸಿ ಖುಷಿಯಲ್ಲಿ ಗ್ರಾಮಕ್ಕೆ ಬಂದ ಯುವಕ ಮನೆ ಸೇರುವ ಮೊದಲೇ ಕಾರಿನೊಂದಿಗೆ ಗ್ರಾಮದ ಅಗಸಿಯಲ್ಲಿಯೇ ಸುಟ್ಟು ಕರಕಲಾದ ಘಟನೆ ಜಮಖಂಡಿ ತಾಲೂಕಿನ ಕನ್ನೋಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೋಳ್ಳಿ ಗ್ರಾಮದ ಸೋಮು ಅಲಿಯಾಸ್‌ ಸೋಮಲಿಂಗಪ್ಪ ಪಡಸಲಗಿ (30) ಸುಟ್ಟು ಕರಕಲಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸದಾಶಿವ ಮಲಕಾರಿ ಪಡಸಲಗಿ, ಹಿರೇಪಡಸಲಗಿ ಗ್ರಾಮದ ರವಿ ಮಲ್ಲನಗೌಡ ಪಾಟೀಲ, ಚಿಕ್ಕಪಡಸಲಗಿ ಗ್ರಾಮದ ಮಹಾವೀರ ಮಾದೇವ ಧರೆಪ್ಪನವರ ಹಾಗೂ ಭೀರಪ್ಪ ಮಲ್ಲಪ್ಪ ಅಡಿಹುಡಿ, ಅಡಿಹುಡಿ ಗ್ರಾಮದ ಮಲ್ಲು ಗಿರಮಲ್ಲ ನಾವಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಯಪ್ಪ ಮಲಕಾರಿ ಪಡಸಲಗಿ, ರಮೇಶ ಮಲಕಾರಿ ಪಡಸಲಗಿ, ಸಿದ್ದು ಮಲಕಾರಿ ಪಡಸಲಗಿ, ಅವಧೂತ ಪರಸಪ್ಪ ಪಡಸಲಗಿ, ಮಾಯಪ್ಪ ಶಿವಪ್ಪ ಧನಗೊಂಡ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.ಹತ್ಯೆಯಾದ ಸೋಮಲಿಂಗಪ್ಪ ಪಡಸಲಗಿ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಸದಾಶಿವ ಪಡಸಲಗಿ ಸಂಶಯ ಪಟ್ಟು ಹಾಗೂ ಈ ಇದೇ ವಿಷಯವಾಗಿ ಈ ಹಿಂದೆ ಜಗಳ ನಡೆದು ಪ್ರಕರಣ ದಾಖಲಿಸಿದ್ದರ ಸೇಡಿನಿಂದ 10 ಜನರು ಸೇರಿಕೊಂಡು ಈ ಕೊಲೆ ನಡೆಸಿದ್ದಾರೆ ಎಂದು ಮೃತನ ತಂದೆ ಸೋಮಲಿಂಗ ಪಡಸಲಗಿ ಸಾವಳಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಗಿದ್ದೇನು?:

ಬಸವ ಜಯಂತಿ ದಿನವಾದ ಸೋಮವಾರ ಸೋಮು ಪಡಸಲಗಿ ಜಮಖಂಡಿಯಲ್ಲಿ ಹೊಸ ಕಾರು ಖರೀದಿಸಿ ಗ್ರಾಮಕ್ಕೆ ಮರಳುತ್ತಿದ್ದ. ಶೋರೂಂನಲ್ಲಿ ಹೊಸ ಕಾರು ಖರೀದಿ ವೇಳೆಯ ಫೋಟೋಗಳನ್ನು ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ. ಅನೈತಿಕ ಸಂಬಂಧ ವಿಷಯವಾಗಿ ಸೋಮು ಜೊತೆಗೆ ವೈಷಮ್ಯ ಹೊಂದಿದ್ದ ಆರೋಪಿ ಸ್ಟೇಟಸ್‌ ನೋಡಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಹೊಂಚು ಹಾಕಿ ಕಾಯ್ದು ಸಂಜೆ 7.35ರ ಸುಮಾರಿಗೆ ಕಾರು ಬರುತ್ತಿದ್ದಂತೆಯೇ ಅಡ್ಡಗಟ್ಟಿದರು. ನಂತರ ಸೋಮುನನ್ನು ಹೊರಗೆಳೆದು ಚಾಕುವಿನಿಂದ ಇರಿದು ಹತ್ಯೆ ಮಾಡಿ ರಸ್ತೆ ಮೇಲೆಯೇ ಕಾರು ಹಾಗೂ ರಕ್ತದ ಮಡುವಿನಲ್ಲಿ ಬಿದ್ದ ಸೋಮು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಸುಟ್ಟಿದ್ದಾರೆ. ಇದರಿಂದ ಸುಟ್ಟು ಅಲ್ಲಿಯೇ ಕರಕಲಾಗಿದ್ದಾನೆ.


ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್‌, ಡಿವೈಎಸ್‌ಪಿ ಸಯ್ಯದ್ ರೋಷನ್ ಜಮೀರ್‌, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅಪ್ಪು ಐಗಳಿ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮಲಿಂಗಪ್ಪ ಹಾಗೂ ಆರೋಪಿಗಳ ಮಧ್ಯೆ ಮೊದಲಿನಿಂದಲೂ ವೈಷಮ್ಯ ಇತ್ತು. ಸೋಮು ಹೊಸ ಕಾರು ಖರಿದಿಸಿದ್ದನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದ. ಇದನ್ನು ಗಮನಿಸಿದ ಆರೋಪಿಗಳು ಈತನನ್ನು ಮುಗಿಸಲು ಸಂಚು ರೂಪಿಸಿ ಬಸ್‌ ನಿಲ್ದಾಣದಲ್ಲಿ ಹೊಂಚು ಹಾಕಿ ಕಾದಿದ್ದರು. ಸೋಮಲಿಂಗಪ್ಪ ಹೊಸ ಕಾರಿನೊಂದಿಗೆ ಬರುತ್ತಿದ್ದಂತೆ ಈ ಕೃತ್ಯ ಎಸಗಿದ್ದಾರೆ. ವಿಚಾರಣೆ ವೇಳೆ ತಾವೇ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

-ಸಿದ್ದಾರ್ಥ ಗೋಯೆಲ್‌ ಎಸ್ಪಿ, ಬಾಗಲಕೋಟೆ