ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನವಾಗಬೇಕಾದರೆ ಸರಳತೆಯಿಂದ ಇರುವುದನ್ನು ಕಲಿಯಬೇಕು

ಕನಕಗಿರಿ: ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಬೇಕಾದರೆ ಎಸ್ಸೆಸ್ಸೆಲ್ಸಿ ಮೆಟ್ಟಿಲನ್ನು ಹತ್ತಲು ಶ್ರಮವಹಿಸಬೇಕು ಎಂದು ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸಿದ್ದಲಿಂಗಪ್ಪ ದೇಮಣ್ಣವರ ಹೇಳಿದರು.

ಅವರು ಶನಿವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನವಾಗಬೇಕಾದರೆ ಸರಳತೆಯಿಂದ ಇರುವುದನ್ನು ಕಲಿಯಬೇಕು. ಪ್ಯಾಶನ್, ಆಡಂಬರದ ಜೀವನವು ಪಾತಾಳಕ್ಕೆ ತಳ್ಳುತ್ತದೆ. ಕಲಿಕಾ ಹಂತದಲ್ಲಿ ಅನ್ಯ ವಿಚಾರಗಳ ಕಡೆಗೆ ಗಮನಹರಿಸದೇ ಪಾಲಕರ ಆಶಯದಂತೆ ಉತ್ತಮವಾಗಿ ಓದಿ, ಒಳ್ಳೆಯ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತರಲು ಮುಂದಾಗಬೇಕು ಎಂದರು.

ಸಿರಿವಾರದ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಶೇಖಪ್ಪ ಅರಷಣಗಿ, ಮೊರಾರ್ಜಿ ವಸತಿ ಶಾಲೆ ತಾಳಕೇರಿಯ ಪ್ರಾಂಶುಪಾಲ ಶಿವಪ್ಪ ಹಾರ್ವಾಳ, ಎಕ್ಷೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಅರುಣಾ ವಸ್ತ್ರದ, ಶಿಕ್ಷಣ ಪ್ರೇಮಿ ರಾಜೇಶ ವಸ್ತ್ರದ, ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ ಮಾತನಾಡಿದರು.

ನಂತರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ತಿಮ್ಮಣ್ಣ ಗದ್ದಿ ಮತ್ತು ಬಸವರಾಜ ಹುಗ್ಗಿ ಅವರನ್ನು ಸನ್ಮಾನಿಸಲಾಯಿತು. ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಧೀರಜ್ ನನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಶಾಂತಾ, ವಂದನಾ ಜೋಶಿ, ಮಲ್ಲಿಕಾರ್ಜುನ ಹಂಪಣ್ಣನವರ್, ಮುದುಕಪ್ಪ ಗಂಗಾವತಿ ರುಬಿಯಾ, ಸುರೇಶ ಹಿರೇಮಠ, ಮೌಲಾ ಹುಸೇನ್, ವಿಶ್ವನಾಥ ಹಳೇಮನಿ, ವಾರ್ಡನ್ ರಮೇಶ ಬೂದಿಹಾಳ ಇತರರಿದ್ದರು.