ಕೊಪ್ಪಳ: ಮಾನವ ಕಳ್ಳ ಸಾಗಾಣಿಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಸಮಸ್ಯೆ ತಡೆಗೆ ಎಲ್ಲರೂ ಶ್ರಮಿಸಬೇಕೆಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.

ನಗರದ ದದೇಗಲ್‌ ತರಬೇತಿ ಸಂಸ್ಥೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಜಿಲ್ಲಾಡಳಿತ,ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂಬಂಧಿತ ಕಾನೂನುಗಳ ಕುರಿತು ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರನ್ನು ಮೋಸ, ಬೆದರಿಕೆ ಅಥವಾ ಬಲವಂತದ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿ ಅವರನ್ನು ಲೈಂಗಿಕ ಶೋಷಣೆ, ಬಲವಂತದ ದುಡಿಮೆ, ಬಾಲಕಾರ್ಮಿಕತೆ, ಭಿಕ್ಷಾಟನೆ ಅಥವಾ ಅಂಗಾಂಗ ಕಳ್ಳಸಾಗಾಣಿಕೆಯಂತಹ ಅಮಾನವೀಯ ಚಟುವಟಿಕೆಗಳಿಗೆ ಬಳಸುವುದೇ ಮಾನವ ಕಳ್ಳ ಸಾಗಾಣಿಕೆಯಾಗಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ಸುಳ್ಳು ಉದ್ಯೋಗದ ಆಮಿಷ ಮತ್ತು ಸಾಮಾಜಿಕ ಅಸಮಾನತೆ ಮಾನವ ಕಳ್ಳ ಸಾಗಾಣಿಕೆಗೆ ಪ್ರಮುಖ ಕಾರಣಗಳಾಗಿವೆ. ದುರ್ಬಲ ವರ್ಗದ ಜನರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಾರೆ ಎಂದರು.

ಸಮಸ್ಯೆ ತಡೆಯಲು ಸರ್ಕಾರ, ಪೊಲೀಸ್ ಇಲಾಖೆ, ಸಾಮಾಜಿಕ ಸಂಘಟನೆ ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು, ಸಾರ್ವಜನಿಕರು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಾನವ ಹಕ್ಕುಗಳ ಉಲ್ಲಂಘನೆಯ ಚಟುವಟಿಕೆ ಕಂಡುಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತನಾಡಿ, ಮಕ್ಕಳ ರಕ್ಷಣಾ ನೀತಿ 2016 ಪರಿಷ್ಕೃತ-2022ರ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸಬೇಕಾದ ನಿಯಮ ಕುರಿತು ಪ್ರತಿಯೊಂದು ಶಾಲೆ, ಕಾಲೇಜು ತನ್ನದೇ ಆದ ಲಿಖಿತ ಮಕ್ಕಳ ರಕ್ಷಣಾ ನೀತಿ ಹೊಂದಿರಬೇಕು. ಶಾಲಾ ಆವರಣದಲ್ಲಿ ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ಹಿಂಸೆ, ಬೆದರಿಕೆ, ರ‍್ಯಾಗಿಂಗ್ ಹಾಗೂ ತಾರತಮ್ಯಕ್ಕೆ ಅವಕಾಶ ನೀಡಬಾರದು. ಶಿಕ್ಷಕರು, ಚಾಲಕರು, ಸಹಾಯಕ ಸಿಬ್ಬಂದಿ ಸೇರಿದಂತೆ ಮಕ್ಕಳೊಂದಿಗೆ ಕೆಲಸ ಮಾಡುವ ಎಲ್ಲರ ಪೊಲೀಸ್ ಹಿನ್ನೆಲೆ ಪರಿಶೀಲನೆ ಪಡೆದುಕೊಳ್ಳಬೇಕು. ಸಮಾಲೋಚನೆ ಅಗತ್ಯವಿರುವ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಸಮಾಲೋಚನಾ ಸೇವೆ ಒದಗಿಸಬೇಕು. ಶಿಕ್ಷಕರು, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಪೊಕ್ಸೋ ಕಾಯ್ದೆಯ ಕುರಿತು ತರಬೇತಿ ನೀಡಬೇಕು ಎಂದು ತಿಳಿಸಿದರು.


ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರ ಪೊಕ್ಸೋ ಕಾಯ್ದೆ ಮತ್ತು ದತ್ತು ಕಾರ್ಯಕ್ರಮ ಮತ್ತು ಫಾಸ್ಟರ್‌ಕೇರ್ ಕುರಿತು ಹಾಗೂ ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ ಕಾಯ್ದೆ-2016 ಹಾಗೂ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕೃತ-2022ರ ಕುರಿತು ಸಮಗ್ರ ಮಾಹಿತಿ ನೀಡಿದರು.

ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮೌನೇಶ ರಾಥೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಬಡಿಗೇರ್ ಸ್ವಾಗತಿಸಿದರು. ರಮೇಶ ನಿರೂಪಿಸಿ, ವಂದಿಸಿದರು,

ಈ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಠಾಣೆಯ ಎ.ಎಸ್.ಐ ಸೂರ್ಯಕಾಂತ್ ಸೇರಿದಂತೆ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.